ಬಿಜೆಪಿ- ಜೆಡಿಎಸ್‌ದು ಪಾಪ ವಿಮೋಚನಾ ಯಾತ್ರೆ

KannadaprabhaNewsNetwork |  
Published : Aug 05, 2024, 12:33 AM IST

ಸಾರಾಂಶ

ಬಿಜೆಪಿ ಹಾಗೂ ಜೆಡಿಎಸ್‌ನವರದ್ದು ಪಾಪವಿಮೋಚನಾ ಯಾತ್ರೆಯಾಗಿದೆ. ಅವರು ಮಾಡಿರುವ ಎಲ್ಲಾ ಪಾಪಗಳನ್ನು ಕಳೆದುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಬಿಜೆಪಿ ಹಾಗೂ ಜೆಡಿಎಸ್‌ನವರದ್ದು ಪಾಪವಿಮೋಚನಾ ಯಾತ್ರೆಯಾಗಿದೆ. ಅವರು ಮಾಡಿರುವ ಎಲ್ಲಾ ಪಾಪಗಳನ್ನು ಕಳೆದುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಅಕ್ರಮಗಳ ಬಗ್ಗೆ ಬಿಜೆಪಿಯವರು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಜಾಹೀರಾತಿನ ಬಗ್ಗೆ ಪಾದಯಾತ್ರೆ ಮಾಡುತ್ತಿರುವವರು ಉತ್ತರ ಕೊಡಬೇಕು. ಬಿಜೆಪಿ ಶಾಸಕ ಯತ್ನಾಳ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಆಗ್ರಹಿಸಿದರು.

ಬಿಜೆಪಿ ಸಿಎಂಗಳು ಏಕೆ ರಾಜೀನಾಮೆ ನೀಡಲಿಲ್ಲ: ಬಿಜೆಪಿ ಅವಧಿಯಲ್ಲಿ ೨೫ ಹಗರಣಗಳಾಗಿವೆ. ಕಿಯೋನಿಕ್ಸ್ ಹಾಗೂ ಪಂಚಾಯ್ತಿಗಳಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಿದ್ದರಲ್ಲಾ ಅದೆಲ್ಲವನ್ನು ಹೊರಗೆ ತೆಗೆಯಬೇಕು. ನಿಮ್ಮ ಅವಧಿಯಲ್ಲಿ ನಡೆದ ಪಿಎಸ್‌ಐ ಹಗರಣ ನಡೆದಾಗ ಸಿಎಂ ಹಾಗೂ ಗೃಹ ಸಚಿವರು ಏಕೆ ರಾಜೀನಾಮೆ ನೀಡಲಿಲ್ಲ? ಹಗರಣವೇ ಇಲ್ಲದ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ರಾಜೀನಾಮೆ ಕೇಳುತ್ತಿದ್ದೀರಿ. ಭೋವಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ನಡೆದಾಗ ನಿಮ್ಮ ಮುಖ್ಯಮಂತ್ರಿಗಳು, ಮಂತ್ರಿಗಳು ಯಾಕೆ ರಾಜೀನಾಮೆ ನೀಡಲಿಲ್ಲ ಎಂದು ಪ್ರಶ್ನಿಸಿದರು.

ನಿಮ್ಮ ಸರ್ಕಾರದ ಅಕ್ರಮಗಳ ಬಗ್ಗೆ ನಾವು ಮಾತನಾಡುವುದಕ್ಕಿಂತ ನಿಮ್ಮ ಪಕ್ಷದ ನಾಯಕರಾದ ಗೂಳಿಹಟ್ಟಿ ಶೇಖರ್, ಬಸನಗೌಡ ಪಾಟೀಲ್ ಯತ್ನಾಳ್, ಎಚ್.ವಿಶ್ವನಾಥ್ ಮಾತನಾಡಿದ್ದಾರೆ. ನಿಮ್ಮ ಸ್ನೇಹಿತರಾದ ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಉತ್ತರ ನೀಡಿ, ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಬಿಜೆಪಿ ನಾಯಕರಾದ ಮೋದಿ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ ತಿಳಿದಿದೆಯೇ. ಹಿಂದೆ ನಿನ್ನನ್ನು ಸಿಎಂ ಮಾಡಿದಾಗ ಅಪ್ಪ ಮಕ್ಕಳ ಕುರಿತು ಎಚ್ಚರದಿಂದ ಇರು ಎಂದು ಯಡಿಯೂರಪ್ಪ ಸಲಹೆ ನೀಡಿದ್ದರು. ನೀನು ರಾಜ್ಯಪಾಲರ ಮೂಲಕ ಅವರನ್ನು ಜೈಲಿಗೆ ಕಳುಹಿಸಿದೆ. ಈಗ ಅವರನ್ನೇ ತಬ್ಬಾಡುತ್ತಿದ್ದೀಯಾ? ಎಂದು ಲೇವಡಿ ಮಾಡಿದರು.

ಯಡಿಯೂರಪ್ಪನವರೇ ಕಣ್ಣೀರು ಹಾಕುತ್ತಾ ರಾಜೀನಾಮೆ ಕೊಟ್ಟಿದ್ದು ಏಕೆ? ಅವರಿಂದ ರಾಜೀನಾಮೆ ಕೊಡಿಸಿದ್ದು ಯಾರು ಎಂದು ಹೇಳಿ. ನಿಮ್ಮ ಮತ್ತು ಬೊಮ್ಮಾಯಿ ಅವರ ಕಾಲದ ಹಗರಣಗಳ ಪಟ್ಟಿ ಇದೆ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದಿರಿ. ಆಗ ಯೋಗೇಶ್ವರ್, ಕುಮಾರಸ್ವಾಮಿ ಜನರ ಕಷ್ಟಕ್ಕೆ ಸ್ಪಂದಿಸಲಿಲ್ಲ. ಆ ಸಮಯದಲ್ಲಿ ಈ ಭಾಗದ ಜನರ ನೆರವಿಗೆ ನಿಂತವರು ಡಿ.ಕೆ.ಸುರೇಶ್ ಹಾಗೂ ಎಸ್.ರವಿ ಎಂದರು.

ಟೂರಿಂಗ್ ಟಾಕೀಸ್ ಮುಂದುವರಿಸಿ:

ಕುಮಾರಸ್ವಾಮಿ ಅವರೇ ನೀವು ನಿಮ್ಮ ಟೂರಿಂಗ್ ಟಾಕೀಸ್ ರಾಜಕಾರಣ ಮಾಡಿ ನಮ್ಮ ಅಭ್ಯಂತರವಿಲ್ಲ. ಮಧುಗಿರಿ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮಾಡಿ, ಮುಂದೆ ಕನಕಪುರಕ್ಕೂ ಬನ್ನಿ. ಕೆಲವರು ನಿಮ್ಮನ್ನು ತಿರಸ್ಕರಿಸಿದ್ದಾರೆ. ಮತ್ತೆ ಕೆಲವರು ಗೆಲ್ಲಿಸಿದ್ದಾರೆ. ಎಲ್ಲಾ ದಿನ ಒಂದೇ ಆಗಿರುವುದಿಲ್ಲ ಜನ ತೀರ್ಮಾನ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ನಿನಗೆ ಎರಡು ಖಾತೆ ನೀಡಿದೆ, ನೀನು ೧೦ ಸಾವಿರ ಜನರಿಗೆ ಕೆಲಸ ಕೊಡುವ ಕಾರ್ಖಾನೆ ಆರಂಭಿಸುತ್ತೇನೆಂದು ಹೇಳಿಕೆ ನೀಡಿದ್ದೀಯ, ನಮ್ಮ ಸರ್ಕಾರದಿಂದ ನಾವು ಸಹಕಾರ ನೀಡುತ್ತೇವೆ. ನೀವು ಎಲ್ಲೆಲ್ಲಿ ಅಂಗಡಿ ಇಟ್ಟಿದ್ದೀರಿ ನನಗೆ ಗೊತ್ತಿದೆ. ನೀನು ಅಧಿಕಾರದಲ್ಲಿದ್ದಾಗ ನಿನ್ನ ಜನರಿಗೆ ಒಂದು ಮನೆ, ನಿವೇಶನ ನೀಡಲಿಲ್ಲ. ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ನೀಡಲಿಲ್ಲ. ನೀನು ನಿನ್ನ ಕುಟುಂಬ ಮಾತ್ರ ಅಧಿಕಾರ ಅನುಭವಿಸಿದ್ದೇ ಆಯ್ತು. ಯಡಿಯೂರಪ್ಪನವರು ಸದನದಲ್ಲಿ ನಿನ್ನ ಬಗ್ಗೆ ಮಾಡಿರುವ ಭಾಷಣದ ಬಗ್ಗೆ ನೀನು ಉತ್ತರ ಕೊಡು ಸಾಕು ಎಂದು ಸವಾಲೆಸೆದರು. ನಾನು ಸ್ಟ್ರೈಟ್ ಫೈಟರ್: ಡಿಕೆಶಿ

ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. ನಾನು ಎಂದಿಗೂ ನೇರವಾಗಿ ಹೋರಾಟ ಮಾಡುವವನು. ನಾನೊಬ್ಬ ಸ್ಟ್ರೈಟ್ ಫೈಟರ್, ಸ್ಟ್ರೀಟ್ ಫೈಟರ್ ಎಂದು ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ದಿನಕ್ಕೊಂದು ಮಾತನಾಡಿದ್ದಾರೆ. ಮೊದಲು ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ, ಡಿ.ಕೆ.ಶಿವಕುಮಾರ್ ಪೆನ್‌ಡ್ರೈವ್ ಹಂಚಿದ್ದಾರೆ ಎಂದರು. ಈಗ ಪ್ರೀತಂಗೌಡ ಬಗ್ಗೆ ಮಾತನಾಡ್ತಿದ್ದಾರೆ. ನಾನು ಹಿಂದೆ ನಿಂತು ಯುದ್ಧ ಮಾಡುವುದಿಲ್ಲ ಎಂದು ಗೊತ್ತಿದೆ. ಈಗಾಗಲೇ ನೀನು ನನ್ನ ವಿರುದ್ಧ ಹೋರಾಡಿ ಸೋತಿದ್ದೀಯಾ. ದೇವರು ಅವಕಾಶ ಕೊಟ್ಟರೆ ಮತ್ತೊಮ್ಮೆ ಸೆಣೆಸಾಡೋಣ ಎಂದು ಪಂಥಾಹ್ವಾನ ನೀಡಿದರು. ಎಚ್‌ಡಿಕೆ ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಂಪಾದಿಸಿದ್ದು: ಡಿಕೆಶಿ

ಚನ್ನಪಟ್ಟಣ: ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮ ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಕುಮಾರಣ್ಣ ನೀನು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಮೊದಲು ನಿನ್ನ ಸಹೋದರ ಬಾಲಕೃಷ್ಣಗೌಡರ ಕುಟುಂಬ ಮೈಸೂರು, ಶ್ರೀರಂಗಪಟ್ಟಣದಲ್ಲಿ ಅವರ ಸಂಬಂಧಿಗಳು ಬೇನಾಮಿಯಾಗಿ ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ಉತ್ತರ ಕೊಡು. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ, ಯಾವ ಈರುಳ್ಳಿ, ಆಲೂಗಡ್ಡೆಯಲ್ಲಿ ಅದು ಸಂಪಾದನೆ ಆಯ್ತು? ಎಂದು ಲೆಕ್ಕ ಕೊಡಬೇಕು ಎಂದು ಸವಾಲೆಸೆದರು.

ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ. ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ, ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀನಲ್ಲ. ನನ್ನ ಮೇಲೆ, ನನ್ನ ಧರ್ಮಪತ್ನಿ, ನನ್ನ ಸಹೋದರಿ, ನನ್ನ ಸಹೋದರನ ಮೇಲೆ ನೀವು ಕೇಸ್ ದಾಖಲಿಸಿ ಏನು ಮಾಡಿದಿರಿ? ಮಿಲಿಟರಿಯವರು ಬಂದು ನನ್ನನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ನೀನು ಹೇಳಿದ್ದೀಯಾ. ಹಾಗಿದ್ದರೆ ನಾನು ಜೈಲಲ್ಲಿ ಇದ್ದಾಗ ಯಾಕೆ ಬಂದು ನನ್ನನ್ನು ನೋಡಿದೆ? ನನ್ನ ಹಾಗೂ ಕುಟುಂಬದ ಮೇಲಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಅದು ಗೊತ್ತಿದೆಯೇ?

ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ, ಗಣಿ ಕೇಸ್, ನಿನ್ನ ಕುಟುಂಬದವರ ಆಸ್ತಿ ಕುರಿತು ಇನ್ನೂ ಚರ್ಚೆ ಮಾಡಿಲ್ಲಾ, ಎಲ್ಲವನ್ನು ಪಟ್ಟಿ ಮಾಡಿ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಎಚ್‌ಡಿಕೆ ಬ್ಲಾಕ್ ಮೇಲರ್:

ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ಗೆ ೧೩೬ ಸೀಟು ಬಂದಿದೆ. ನಿನ್ನ ಅಧ್ಯಕ್ಷತೆಯಲ್ಲಿ ನಿನ್ನ ಪಕ್ಷಕ್ಕೆ ೧೯ ಸೀಟು ಬಂದಿದೆ. ಈಗ ನಿನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದೀಯ. ಕುಮಾರಸ್ವಾಮಿಯದು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ.ಟಿ.ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ? ಪಾದಯಾತ್ರೆಗೆ ಬರಲ್ಲ ಎಂದು ಹೇಳಿದವನು, ಈಗ ಯಾಕೆ ಭಾಗವಹಿಸಿದ್ದೀಯಾ? ಕೇವಲ ನಿನ್ನ ಅಧಿಕಾರಕ್ಕೋಸ್ಕರ ನಿನ್ನ ಪಕ್ಷವನ್ನೇ ಮುಳುಗಿಸಲು ಹೊರಟಿದ್ದೀಯಾ ಎಂದು ಛೇಡಿಸಿದರು.

ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ:

ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ, ಅದೇ ರೀತಿ ಎಲ್ಲರೂ ರೈತನ ಮಕ್ಕಳಾಗಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ರೈತರ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ್ದೇವೆ. ಅರಣ್ಯ ಕಾಯ್ದೆಯಲ್ಲಿ ರೈತರಿಗೆ ಜಮೀನು ನೀಡಿದ್ದೇವೆ. ಕುಮಾರಸ್ವಾಮಿ ಅವರೇ, ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ ಏಕೆ ಎಂದು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದ ಜನರ ಕೈ ಹಿಡಿಯಲು ಬದ್ಧ:

ಚನ್ನಪಟ್ಟಣದ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ಇಲ್ಲಿ ನಿಜವಾದ ಅಭ್ಯರ್ಥಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್. ಇಲ್ಲಿ ಹಸ್ತದ ಗುರುತೇ ಅಭ್ಯರ್ಥಿ. ನಾನು ಇಲ್ಲಿನ ಶಾಸಕನಂತೆ ಕೆಲಸ ಮಾಡುತ್ತೇನೆ. ಇದಕ್ಕೆ ನೀವು ಅವಕಾಶ ಮಾಡಿಕೊಡಬೇಕು. ಚನ್ನಪಟ್ಟಣದಲ್ಲಿ ಬಡವವರಿಗೆ ನಿವೇಶನ ನೀಡಲು ಜಾಗ ಗುರುತಿಸುತ್ತಿದ್ದೇವೆ. ವಸತಿ ಸಚಿವ ಜಮೀರ್ ಅವರು ಈ ಕ್ಷೇತ್ರಕ್ಕೆ ೫ ಸಾವಿರ ಮನೆ ಮಂಜೂರು ಮಾಡುವುದಾಗಿ ಹೇಳಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ೧೦೦ ಕೋಟಿ ನೀಡಲು ಮುಖ್ಯಮಂತ್ರಿಗಳು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ
ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ