ಕನ್ನಡಪ್ರಭ ವಾರ್ತೆ, ತುಮಕೂರುಆಗ್ನೇಯ ಪದವೀಧರ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಕ್ಷೇತ್ರದಾದ್ಯಂತ ಪದವೀಧರ ಮತದಾರರ ನೋಂದಣಿ ಕಾರ್ಯ ಆರಂಭಿಸಿದೆ. ಕನಿಷ್ಟ 1.20 ಲಕ್ಷ ಮತದಾರರನ್ನು ನೋಂದಣಿ ಮಾಡಲುಗುರಿ ಹೊಂದಲಾಗಿದೆ ಎಂದು ರಾಜ್ಯ ಬಿಜೆಪಿ ಕಾನೂನು ಮೋರ್ಚಾ ಸಂಚಾಲಕ ವಸಂತಕುಮಾರ್ ಹೇಳಿದರು.ಮಂಗಳವಾರ ಬಿಜೆಪಿ ಮುಖಂಡರು ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಜಿಲ್ಲೆಯಲ್ಲಿ ಪದವಿಧರ ಮತದಾರರ ನೋಂದಣಿ ಕಾರ್ಯ ಆರಂಭಿಸಿದರು.ನಂತರ ನಗರದಲ್ಲಿ ಮುಖಂಡರ ಸಭೆ ನಡೆಸಿ ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ನೋಂದಣಿ ಮಾಡಿಸಲು ಶ್ರಮಿಸಬೇಕು ಎಂದು ವಸಂತಕುಮಾರ್ ಕೋರಿದರು.ತಾವು ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ರಾಜ್ಯ ನಾಯಕರ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಮತದಾರರ ನೋಂದಣಿ ಕಾರ್ಯ ಆರಂಭಿಸಿರುವುದಾಗಿ ಹೇಳಿದ ಅವರು, 1.20 ಲಕ್ಷ ಮತದಾರರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದರು.ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಪದವೀಧರರು ಚಲಾಯಿಸಬೇಕು. ಅದಕ್ಕಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.ಈ ಮೊದಲು ಮತಚಲಾಯಿಸಿದವರೂ ಮತ್ತೆ ಈ ಬಾರಿಯೂ ನೋಂದಣಿ ಮಾಡಿಸಬೇಕು.ನಮೂನೆ 18ರ ಅರ್ಜಿಯನ್ನು ಪಕ್ಷದಿಂದ ವಿತರಣೆ ಮಾಡಲಾಗುತ್ತಿದೆ. ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ಚುನಾವಣಾ ಶಾಖೆಗೆ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಸುವಂತೆ ಮನವಿ ಮಾಡಿದರು.ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಳಿಗೆ ಪ್ರೋತ್ಸಾಹ, ಸಣ್ಣಪಟ್ಟ ಉದ್ಯೋಗಗಳ ಸೃಷ್ಟಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಸ್ಥಾಪಿಸುವ ಮೂಲಕ ಅವರು ಉನ್ನತ ಸ್ಥಾನ ಪಡೆಯಲು ನೆರವಾಗುವುದೂ ಸೇರಿದಂತೆ ಪದವೀಧರರ ಬದುಕುರೂಪಿಸುವಂತಹ ಯೋಜನೆಗಳನ್ನು ಜಾರಿಗೆತರಬೇಕಾಗಿದೆ ಎಂದು ಹೇಳಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, 2026 ರಲ್ಲಿ ನಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ, ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾಗಿದೆ.ಅದಕ್ಕಾಗಿ ಹೆಚ್ಚು ಜನ ಪದವೀಧರ ಮತದಾರರನ್ನು ನೋಂದಾಯಿಸುವ ಕಾರ್ಯ ಆರಂಭವಾಗಿದೆ ಎಂದರು.ಜಿಲ್ಲೆಯ ಬಿಜೆಪಿಯ ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಪದವೀಧರ ಶ್ರಮವಹಿಸಿ ಕೆಲಸ ಮಾಡಬೇಕು.ಪದವಿಧರರನ್ನು ಗುರುತಿಸಿ ಅವರು ಮತದಾರರ ಪಟ್ಟಿಯಲ್ಲಿ ಸೇರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಬಿಜೆಪಿ ಕಾನೂನು ಮೋರ್ಚಾ ಸಂಚಾಲಕ ಸಿ.ಎಸ್.ಕುಮಾರಸ್ವಾಮಿ, ರಾಜ್ಯ ಮೋರ್ಚಾ ಸದಸ್ಯ ಹಿಮಾನಂದ್, ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ, ಮುಖಂಡರಾದ ಡಾ.ನಟರಾಜು, ವಿಶ್ವನಾಥ್, ಸುರೇಶ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.