ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಸುನಿಲ್ ಕುಮಾರ್ ಸೇರಿದಂತೆ ಹಲವರು ಘಟನೆಯನ್ನು ಖಂಡಿಸಿ ಸರ್ಕಾರದ ವೈಫಲ್ಯವೇ ಕಾರಣ ಎಂದು ಟೀಕಿಸಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಗಮಂಗಲದಲ್ಲಿನ ಘಟನೆಯು ಸಮಾಜದ ಶಾಂತಿ ಮತ್ತು ಏಕತೆಗೆ ಧಕ್ಕೆಯನ್ನುಂಟು ಮಾಡಿದೆ. ಧರ್ಮ, ಜಾತಿ ಅಥವಾ ಇತರೆ ಕಾರಣಗಳಿಂದ ಯಾವ ರೀತಿಯ ಅಹಿತಕರ ವರ್ತನೆಗಳು ಸಹ ಸಮರ್ಥನೀಯವಲ್ಲ. ಕಿಡಿಗೇಡಿತನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಸಮುದಾಯಗಳ ನಡುವೆ ನೆಮ್ಮದಿಯನ್ನು ಕಾಪಾಡಲು ಸಹಕರಿಸಬೇಕು. ಭಯ, ಅಸಹನೆ ಮತ್ತು ಅಶಾಂತಿ ಎಂಬುವಂತಹ ಸ್ಥಿತಿಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಮ್ಮ ರಕ್ಷಣೆಗೆ ಹಿಂದುಗಳು ಸಹ ಖಡ್ಗ ಹಿಡಿದುಕೊಂಡು ಓಡಾಡುವ ಸಮಯ ಬಂದಿದೆ. ರಾಜ್ಯದಲ್ಲಿ ಯೋಗಿ ಮಾದರಿಯ ಆಡಳಿತ ಮತ್ತು ಯೋಗಿಯಂತಹ ನಾಯಕ ಬೇಕಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಗಳು ಖಡ್ಗ ಹಿಡಿದ ದಿನ ಇರುವುದಿಲ್ಲ. 2013ರಿಂದ 2018 ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು, ಆಗಲೂ ಹಿಂದುಗಳ ಕಗ್ಗೊಲೆ ಆಗ್ತಿತ್ತು. ಸಿದ್ದರಾಮಯ್ಯ ಸರ್ಕಾರ ಬಂದರೆ ಅದು ತಾಲಿಬಾನ್ ಸರ್ಕಾರ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
======
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದುಗಳನ್ನು ತುಳಿಯುವ ಕೆಲಸವಾಗುತ್ತಿದೆ. ಹಿಂದೂಗಳಿಗೆ ನಿರಂತರವಾಗಿ ಅಪಮಾನವಾಗುತ್ತಿದೆ. ನಾಗಮಂಗಲದಲ್ಲಿ ನಡೆದ ಘಟನೆಯು ದುಃಖ ತಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹಿಂದೂಗಳು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಾಗಮಂಗಲದಲ್ಲಿ ನಡೆದ ಘಟನೆಯು ಪೂರ್ವ ನಿಯೋಜಿತವಾಗಿದೆ. ಅವರ ಮತವೇ ಇನ್ನೊಬ್ಬರನ್ನು ಸಹಿಸದೇ ಇರುವುದು. ಗಣೇಶೋತ್ಸವ ಆ ರಸ್ತೆಯಲ್ಲಿ ಹೋಗಬಾರದು ಎನ್ನೋದಕ್ಕೆ ಅವರು ಯಾರು? ಕಲ್ಲು ರೆಡಿಯಾಗಿ ಇಟ್ಟಿದ್ದರು. ಬೀಗ ಹಾಕಿದ ಅಂಗಡಿ ಸುಟ್ಟಿದ್ದಾರೆ. ಗಲಭೆ ಎಬ್ಬಿಸಲೆಂದೇ ಕೃತ್ಯ ಎಸಗಿದ್ದಾರೆ. ತುಷ್ಟೀಕರಣದಿಂದ ಇದೆಲ್ಲಾ ನಡೆಯುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಪರಂ ಆಕಸ್ಮಿಕವಾಗೇ ರಾಜೀನಾಮೆ ನೀಡ್ಲಿ: ಯತ್ನಾಳ್‌ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗುಂಪು ಘರ್ಷಣೆ ವಿಷಯದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದು ಆಕಸ್ಮಿಕ ಘಟನೆ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕಸ್ಮಿಕವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆಗ್ರಹಿಸಿದ್ದಾರೆ.