ಶಾಸಕ ಶಿವಲಿಂಗೇಗೌಡ ವರ್ತನೆಗೆ ಬಿಜೆಪಿ ನಾಯಕರ ಖಂಡನೆ

KannadaprabhaNewsNetwork |  
Published : Feb 06, 2026, 01:30 AM IST
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಮಾತನಾಡಿದರು | Kannada Prabha

ಸಾರಾಂಶ

ವಿಧಾನಸಭೆಯ ಗಾಂಭೀರ್ಯ ಮತ್ತು ಸಂಸ್ಕೃತಿಗೆ ಧಕ್ಕೆ ತರುವ ರೀತಿಯಲ್ಲಿ ಅವಾಚ್ಯ ಹಾಗೂ ಅಸಂಯಮಿತ ಭಾಷೆ ಬಳಸಿ ಮಾತನಾಡಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರು, ತಮ್ಮ ಕ್ಷೇತ್ರದ ಮತದಾರರ ಗೌರವವನ್ನು ಹರಾಜು ಹಾಕಿದ್ದಾರೆ ಎಂದು ಬಿಜೆಪಿ ಮುಖಂಡರಾದ ಜಿವಿಟಿ ಬಸವರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚುನಾಯಿತ ಶಾಸಕರನ್ನು ಹಾಗೂ ಅವರ ಕುಟುಂಬದವರ ಹೆಸರನ್ನು ಉಲ್ಲೇಖಿಸಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ವರ್ತನೆಯಿಂದ ಶಾಸಕರ ನಿಜ ಸ್ವರೂಪ ಸದನದಲ್ಲೇ ಬಹಿರಂಗವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿಧಾನಸಭೆಯ ಗಾಂಭೀರ್ಯ ಮತ್ತು ಸಂಸ್ಕೃತಿಗೆ ಧಕ್ಕೆ ತರುವ ರೀತಿಯಲ್ಲಿ ಅವಾಚ್ಯ ಹಾಗೂ ಅಸಂಯಮಿತ ಭಾಷೆ ಬಳಸಿ ಮಾತನಾಡಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರು, ತಮ್ಮ ಕ್ಷೇತ್ರದ ಮತದಾರರ ಗೌರವವನ್ನು ಹರಾಜು ಹಾಕಿದ್ದಾರೆ ಎಂದು ಬಿಜೆಪಿ ಮುಖಂಡರಾದ ಜಿವಿಟಿ ಬಸವರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಗೌರವವನ್ನು ಮರೆತು, ಸಂತೆಯಲ್ಲಿ ಮಾತನಾಡುವ ರೀತಿಯಲ್ಲಿ ಮತ್ತೊಂದು ಪಕ್ಷದ ಚುನಾಯಿತ ಶಾಸಕರನ್ನು ಹಾಗೂ ಅವರ ಕುಟುಂಬದವರ ಹೆಸರನ್ನು ಉಲ್ಲೇಖಿಸಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ವರ್ತನೆಯಿಂದ ಶಾಸಕರ ನಿಜ ಸ್ವರೂಪ ಸದನದಲ್ಲೇ ಬಹಿರಂಗವಾಗಿದೆ ಎಂದು ವಾಗ್ದಾಳಿ ನಡೆಸಿದರು.ಇದೇ ವೇಳೆ ಆರ್‌ಎಸ್‌ಎಸ್ ಕುರಿತು ಶಾಸಕ ಶಿವಲಿಂಗೇಗೌಡರು ಮಾಡಿದ ಹೇಳಿಕೆಗಳು ಅತ್ಯಂತ ಖಂಡನೀಯವಾಗಿದ್ದು, ದೇಶಭಕ್ತ ಸಂಘಟನೆಯ ಬಗ್ಗೆ ಅರಿವು ಇಲ್ಲದೆ ಮಾತನಾಡಿರುವುದು ಕೋಟ್ಯಂತರ ಕಾರ್ಯಕರ್ತರು ಹಾಗೂ ಬೆಂಬಲಿಗರ ಮನಸ್ಸಿಗೆ ಆಘಾತ ತಂದಿದೆ ಎಂದು ಟೀಕಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎನ್.ಡಿ. ಪ್ರಸಾದ್, ಶಾಸಕ ಶಿವಲಿಂಗೇಗೌಡರು ತಮ್ಮ ಜವಾಬ್ದಾರಿಯನ್ನೇ ಮರೆತು, ಆರ್‌ಎಸ್‌ಎಸ್ ಎಂಬ ರಾಷ್ಟ್ರಭಕ್ತಿ ಹೊಂದಿದ ಸಂಘಟನೆಯ ಬಗ್ಗೆ ಸೂಚ್ಯಾರ್ಥದ ಮಾತುಗಳನ್ನಾಡಿದ್ದಾರೆ. ಇದರಿಂದ ಕೇವಲ ಆರ್‌ಎಸ್‌ಎಸ್ ಮಾತ್ರವಲ್ಲದೆ, ಸಂಘಟನೆಯ ಮೇಲೆ ನಂಬಿಕೆ ಇಟ್ಟಿರುವ ಲಕ್ಷಾಂತರ ಜನರ ಮನಸ್ಸಿಗೆ ಮರ್ಮಘಾತವಾಗಿದೆ. ಸದನದಲ್ಲಿ ಇಂತಹ ಕ್ರೂರ ಭಾಷೆಯನ್ನು ಇದುವರೆಗೆ ಯಾರೂ ಬಳಸಿಲ್ಲ.

ಬಿಜೆಪಿ ಆಡಳಿತದ ಅವಧಿಯಲ್ಲಿ ಇವರಿಗೆ ‘ಸದನ ಶೂರ’ ಪ್ರಶಸ್ತಿ ನೀಡಲಾಗಿತ್ತು. ಆದರೆ ಇಂದಿನ ಅವರ ವರ್ತನೆ ನೋಡಿದರೆ ಅವರು ಸದನ ಶೂರರಲ್ಲ, ಸದನ ಕ್ರೂರರು ಎನ್ನುವುದು ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಹೈಕಮಾಂಡನ್ನು ಓಲೈಸಿ ಸಚಿವ ಸ್ಥಾನ ಪಡೆಯುವ ಉದ್ದೇಶದಿಂದಲೇ ಇಂತಹ ಅತಿರೇಕದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕರು ಈ ರೀತಿ ಮಾತನಾಡುವ ಸಂದರ್ಭದಲ್ಲಿ ಸದನಾಧ್ಯಕ್ಷರು ತಕ್ಷಣವೇ ಕಡಿವಾಣ ಹಾಕಬೇಕಾಗಿತ್ತು. ಆದರೆ ಸ್ಪೀಕರ್‌ ಅವರ ವರ್ತನೆ ಪರೋಕ್ಷ ಬೆಂಬಲ ನೀಡಿದಂತೆ ಕಂಡಿತು. ಆರ್‌ಎಸ್‌ಎಸ್ ಅನ್ನು ದೂಷಿಸಿದರೆ ಅವರಿಗೆ ಏನೋ ಲಾಭ ಸಿಗುವಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಶಿವಲಿಂಗೇಗೌಡರ ಪಾಪದ ಕೊಡ ತುಂಬಿ ತುಳುಕಿದ್ದು, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅವರು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಯತೀಶ್ ಮಾತನಾಡಿ, ಶಾಸಕ ಶಿವಲಿಂಗೇಗೌಡರು ಪ್ರತಿಯೊಂದು ಅಧಿವೇಶನದಲ್ಲೂ ಅಹಂಕಾರಪೂರ್ಣ ಭಾಷೆ ಬಳಸುವುದು ನಿಲ್ಲಿಸಬೇಕು. ಹಳ್ಳಿಯಲ್ಲಿ ಬೆಳೆದಿದ್ದೇವೆ ಎಂದು ಹೇಳಿಕೊಂಡು ರೈತರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರೈತರು ಯಾವತ್ತೂ ಅಸಂಸ್ಕೃತವಾಗಿ ಮಾತನಾಡುವುದಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ರೈತರ ಹೆಸರನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇವರ ರಾಜಕೀಯ ಉದ್ದೇಶ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ದೂಷಿಸುವುದಷ್ಟೇ ಆಗಿದೆ. ಜೊತೆಗೆ ನಿರ್ದಿಷ್ಟ ಸಮುದಾಯದ ಓಲೈಕೆಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಇತಿಹಾಸವನ್ನು ಅರಿತುಕೊಂಡು ಮಾತನಾಡಬೇಕು. ಅಭಿವೃದ್ಧಿ ವಿಚಾರಗಳ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡ ದುಮ್ಮೇನಹಳ್ಳಿ ಗಂಗಾಧರ್‌, ನಗರ ಮಂಡಲದ ಅಧ್ಯಕ್ಷ ಅವಿನಾಶ್ ನಾಯ್ಡು, ಬಾಣಾವರ ಜಯಣ್ಣ, ನಗರ ಮಂಡಲದ ಮಾಜಿ ಅಧ್ಯಕ್ಷ ಪುರುಷೋತ್ತಮ್, ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷ ರಮೇಶ್, ಶಿಲ್ಪಾ ಸತೀಶ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಕಾಂಗ್ರೆಸ್‌ ಶಾಸಕರಿಂದ ಒತ್ತಡ
ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ