ಗಜೇಂದ್ರಗಡ: ಬಲಿಷ್ಠ ಹಾಗೂ ಸುಭದ್ರ ದೇಶಕ್ಕಾಗಿ ಪ್ರಧಾನಿ ಮೋದಿ ಅವರ ಆಡಳಿತ ಅನಿವಾರ್ಯ ಎಂಬ ಸಂದೇಶ ದೇಶದಲ್ಲಿ ಚರ್ಚಿತವಾಗುತ್ತಿದ್ದು, ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ದೇಶದ ಜನತೆ ನಿರ್ಧರಿಸಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಹಾ ಶಕ್ತಿ ಕೇಂದ್ರ ಸಂಘಟನಾತ್ಮಕ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ೨ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಜನಪರ, ರೈತಪರ ಹಾಗೂ ಕಾರ್ಮಿಕ ವಲಯದ ಹಿತದ ಜತೆಗೆ ಸರ್ವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಇತಿಹಾಸದಲ್ಲಿ ಪಾರದರ್ಶಕ ಆಡಳಿತ ಮೂಲಕ ವಿಶ್ವದ ಗಮನ ಸೆಳೆದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಹುಸಂಖ್ಯಾತರ ಬೇಡಿಕೆಗಳನ್ನು ಈಡೇರಿಸುವ ಜತೆಗೆ ಸರ್ವರನ್ನು ಸಮಾನವಾಗಿ ಕರೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಿಕ್ಕಿರುವ ಜನಾದೇಶವು ಲೋಕಸಭಾ ಚುನಾವಣೆಯ ಕೈಗನ್ನಡಿಯಾಗಿದೆ. ಜನತೆ ಈಗಾಗಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಗೆ ನಿರ್ಧರಿಸಿದ್ದು, ಪಕ್ಷದ ಕಾರ್ಯಕರ್ತರು ಬಿಜೆಪಿ ಸರ್ಕಾರದ ಜನಪರ ಆಡಳಿತವನ್ನು ಮತದಾರರಿಗೆ ತಿಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.ಹಾವೇರಿ ಲೋಕಸಭಾ ಕ್ಷೇತ್ರದ ವಿಸ್ತಾರಕ ಸಾಗರ ಹೊಸಮನಿ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸರಳವಾಗಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರವನ್ನು ದೇಶವೇ ನೋಡುವಂತಾಗಬೇಕು. ಹೀಗಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಜನವಿರೋಧಿ ಆಡಳಿತದ ಬಗ್ಗೆ ಕ್ಷೇತ್ರದ ಜನತೆಗೆ ತಿಳಿಸುವ ಜತೆಗೆ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ತಿಳಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬೇಕು ಎಂದರು.
ಪುರಸಭೆ ಸದಸ್ಯರಾದ ರೂಪೇಶ ರಾಠೋಡ, ಶರಣಪ್ಪ ಉಪ್ಪಿನಬೆಟಗೇರಿ ಹಾಗೂ ರೇವಣಪ್ಪ ಮಳಗಿ, ಶ್ರೀನಿವಾಸ ಸವದಿ, ಉಮೇಶ ಚನ್ನುಪಾಟೀಲ, ಬಸವರಾಜ ಸೂಡಿ, ಸೂಗುರೇಶ ಚೋಳಿನ, ಮಲ್ಲು ಗೌಡರ ಇದ್ದರು.