ಜಗಳೂರುನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸಲು ಆಗ್ರಹ

KannadaprabhaNewsNetwork |  
Published : Dec 08, 2023, 01:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಜಗಳೂರನ್ನು ಮರಳಿ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಬಸ್ಸೊಂದರಲ್ಲಿ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಹೋರಾಟ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮರು ಸೇರ್ಪಡೆ ಸಂಬಂಧ ಸರ್ಕಾರ ನೀಡಿರುವ ಸೂಚನೆಗಳ ಪಾಲಿಸುವಲ್ಲಿ ಆಡಳಿತವರ್ಗ ನಿಧಾನ ಪ್ರವೃತ್ತಿ ತೋರುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಹೋರಾಟಗಾರರು । ಆಡಳಿತ ವರ್ಗದ ನಿಧಾನಗತಿ ಪ್ರವೃತ್ತಿಗೆ ಆಸಮಾಧಾನಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಗಳೂರನ್ನು ಮರಳಿ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಸ್ಸೊಂದರಲ್ಲಿ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಹೋರಾಟ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮರು ಸೇರ್ಪಡೆ ಸಂಬಂಧ ಸರ್ಕಾರ ನೀಡಿರುವ ಸೂಚನೆಗಳ ಪಾಲಿಸುವಲ್ಲಿ ಆಡಳಿತವರ್ಗ ನಿಧಾನ ಪ್ರವೃತ್ತಿ ತೋರುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಕಂದಾಯ ಸಚಿವರು, ಮುಖ್ಯಮಂತ್ರಿಯವರ ಉಪಕಾರ್ಯದರ್ಶಿಗಳು ಈ ಸಂಬಂಧ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಸೂಚಿಸಿದ್ದರು. ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಅಗತ್ಯ ಕ್ರಮದ ಬಗ್ಗೆ ನಿರ್ದೇಶನ ನೀಡಿದ್ದರೂ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಾತನಾಡಿದ ನಿವೃತ್ತ ಪ್ರಾಚಾರ್ಯ ಸಂಗೇನಹಳ್ಳಿ ಅಶೋಕ್ ಕುಮಾರ್, ಜಗಳೂರು ಹಾಗೂ ಚಿತ್ರದುರ್ಗಕ್ಕೆ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದ್ದು ಸಾಂಸ್ಕೃತಿಕವಾಗಿಯೂ ಬೆಸುಗೆ ಇದೆ. 25 ವರ್ಷಗಳ ಹಿಂದೆ ಜೆ.ಎಚ್.ಪಟೇಲ್ ಅವರು ಆರು ಹೊಸ ಜಿಲ್ಲೆಗಳ ಮಾಡುವಾಗ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ಜಗಳೂರನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಿದರು. ಅಂದಿನಿಂದಲೂ ಜಗಳೂರಿನ ಜನ ವಿರೋಧ ಮಾಡುತ್ತಲೇ ಬಂದಿದ್ದರೂ ಆಳುವ ವರ್ಗ ಕಿವಿಗೆ ಹಾಕಿಕೊಂಡಿಲ್ಲವೆಂದು ದೂರಿದರು.

ಪ್ರಗತಿಪರ ಚಿಂತಕ ಜಗಳೂರು ಯಾದವರೆಡ್ಡಿ ಮಾತನಾಡಿ, ಜಗಳೂರು ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಿದ ನಂತರ ಮರಳಿ ರಾಜ್ಯ ಸರ್ಕಾರ ತನ್ನ ನಿಲುವು ಬದಲಿಸಬಾರದೆಂದೇನಿಲ್ಲ. ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೇ. ಈ ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು. ಇದೀಗ ಅಲ್ಲಿಂದ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ಜಗಳೂರನ್ನು ಮರಳಿ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡಿದರೆ ಸರ್ಕಾರ ಕಳೆದುಕೊಳ್ಳುವುದಾದರೂ ಏನೆಂದು ಪ್ರಶ್ನಿಸಿದರು.

ಆರ್.ಓಬಳೇಶ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಜಗಳೂರು ಸೇರ್ಪಡೆಯಾಗಿದ್ದು ಈ ವಿಚಾರದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಇತರೆ ಜನಪ್ರತಿನಿಧಿಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸದಾ ಮಲತಾಯಿ ಧೋರಣೆ ತಳೆಯಲಾಗುತ್ತಿದೆ. ಹಾಗಾಗಿ ಜಗಳೂರು ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಯಾದರೆ ಈ ಭಾಗದ ಜನರ ಬದುಕು ಹಸನಾಗಲು ಮಾರ್ಗಗಳು ಗೋಚರಿಸುತ್ತವೆ ಎಂದರು.ಜಗಳೂರು ಮರು ಸೇರ್ಪಡೆ ಹೋರಾಟ ಸಮಿತಿ ಉಪಾಧ್ಯಕ್ಷ ನಿಬ್ಬಗೂರು ಎಂ.ಆರ್.ಪುಟ್ಟಣ್ಣ, ರಾಜಪ್ಪ, ಖಜಾಂಚಿ ಖಾದರ್‌ಸಾಬ್, ತಿಪ್ಪೇಸ್ವಾಮಿ, ಸಣ್ಣ ಸೂರಯ್ಯ, ಅಸಗೋಡು ಕೊಟ್ಟೂರುಸ್ವಾಮಿ, ನಾಗಲಿಂಗಪ್ಪ, ವೀರಸ್ವಾಮಿ, ಧನ್ಯಕುಮಾರ್, ಎಂ.ಲೋಕೇಶ್ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.

----------------------

ಜಗಳೂರು ತಾಲೂಕಿನ ಜನತೆ ಎಂದಿಗೂ ದಾವಣಗೆರೆ ಯವರೊಂದಿಗೆ ಸಮೀಕರಣಗೊಳ್ಳಲು ಸಾಧ್ಯವಿಲ್ಲ. ಜಗಳೂರು ಸದಾ ಬರದ ಸೀಮೆಯಾಗಿದ್ದು ಚಿತ್ರದುರ್ಗದೊಂದಿಗೆ ಬೆರೆಯುತ್ತದೆ. ದಾವಣಗೆರೆ ಯ ನೀರಾವರಿ ಪ್ರದೇಶದ ಜನರೊಂದಿಗೆ ಕುಸ್ತಿಯಾಡಿ ಸರ್ಕಾರಿ ಸೌಲಭ್ಯ ಪಡೆಯುವುದು ಕಷ್ಟಕರ ಸಂಗತಿ. ಹಾಗಾಗಿ ಜಗಳೂರನ್ನು ಮರಳಿ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡಿದ್ದಲ್ಲಿ ಭಾವನಾತ್ಮಕವಾಗಿ ಒಂದು ಗೂಡಲು ಸಾಧ್ಯವಾಗುತ್ತದೆಯಲ್ಲದೇ ಕಷ್ಟಗಳ ನಿವಾರಣೆಗೆ ಸಹಮತ ದೊರೆಯುತ್ತದೆ.

- ಬಿ.ತಿಮ್ಮಾರೆಡ್ಡಿ, ಜಗಳೂರು ಮರು ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ