ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಗಡಿಯಾರ ಕಂಬದ ಬಳಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಗಾಯತ್ರಿ ಸಿದ್ದೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಪ್ರತಿಕೃತಿಯನ್ನು ಮಾಡಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮಾತನಾಡಿದ ಗಾಯತ್ರಿ ಸಿದ್ದೇಶ್ವರ, ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತದಲ್ಲಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಿದೆಯೇ ಹೊರತು, ಗೃಹ ಬಳಕೆಯ ಸಿಲಿಂಡರ್‌ಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೂ, ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷದ ಸಂಸದರು ಕೇಂದ್ರದ ವಿರುದ್ಧ ಅಪಪ್ರಚಾರ ಮಾಡುತ್ತ, ದೇಶ ವಾಸಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದವರು ಜಾಗತಿಕ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಇರಾನ್‌ನಿಂದ ನಿರ್ಬಂಧಿತವಾದ ಹೋರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ಮೊದಲ ತೈಲ ನೌಕೆ ಬಂದಿದೆ. ಇನ್ನೂ ಸಾಕಷ್ಟು ತೈಲ ಹಡಗುಗಳು ಭಾರತಕ್ಕೆ ಬರಲಿವೆ. ಮಧ್ಯ ಪ್ರಾಚ್ಯದ ಯುದ್ಧದ ಮಧ್ಯೆಯೂ ಭಾರತದ ತೈಲ ಹಡಗುಗಳ ಸಂಚಾರಕ್ಕೆಇರಾನ್ ಸಹ ಸಮ್ಮತಿಸಿರಿವುದು ನರೇಂದ್ರ ಮೋದಿಯವರ ಉತ್ತಮ ಅಂತಾರಾಷ್ಟ್ರೀಯ ಸಂಬಂಧಕ್ಕೆ ಕಾರಣವಾಗಿದೆ ಎಂದರು.
ಪಕ್ಷದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ, ಮುಖಂಡರಾದ ಭಾಗ್ಯ ಪಿಸಾಳೆ, ದೇವೀರಮ್ಮ, ರೇಣುಕಾ ಕೃಷ್ಣ, ಚೇತನಾ ಬಾಯಿ, ನೀತಾ ನಂದೀಶ, ಮಂಜುಳಾ ಇಟಗಿ, ವೀಣಾ ನಂಜಪ್ಪ, ಸೀಮಾ, ಶಾಂತಮ್ಮ, ಗೌರಮ್ಮ ಪಾಟೀಲ, ಶ್ಯಾಗಲೆ ದೇವೇಂದ್ರಪ್ಪ, ತಾರೇಶ ನಾಯ್ಕ, ಮಾಯಕೊಂಡ ಜಿ.ಎಸ್.ಶ್ಯಾಮ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಗುರು ಸೋಗಿ, ಶಂಕರಗೌಡ ಬಿರಾದಾರ, ತರಕಾರಿ ಶಿವು, ಬಾಲಚಂದ್ರಶ್ರೇಷ್ಟಿ, ವೈ.ಶಿವಾನಂದ, ಕಿಶೋರಕುಮಾರ, ಬಸಣ್ಣ, ಕುಮಾರ, ರಾಮಚಂದ್ರ, ಮಾಲತೇಶ, ಗೋವಿಂದರಾಜ ಇತರರು ಇದ್ದರು.
ತಮಿಳುನಾಡಿನ ಬೆಟ್ಟದ ಮೇಲಿನ ತಿರುವನಂತಪುರಂನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ದೀಪಗಳನ್ನು ಹಚ್ಚಲು ಸುಪ್ರೀಂ ಆದೇಶ ಕೊಟ್ಟಿತ್ತು. ಆದರೆ, ಕೆಲವು ಕಾಂಗ್ರೆಸ್ ಸಂಸದರು ದೀಪವನ್ನು ಹಚ್ಚದಂತೆ ಸಹಿ ಹಾಕಿದ್ದರು. ಇತ್ತ ದುಗ್ಗಮ್ಮನ ಹಬ್ಬದ ಹಂದರಗಂಬ ಪೂಜೆಯಲ್ಲಿ ತಾವೇ ದೀಪ ಹಚ್ಚಿದ ದಾವಣಗೆರೆ ಸಂಸದರು ಅತ್ತ ತಮಿಳುನಾಡಿನ ವೆಂಕಟೇಶ್ವರ ದೇವ ಸ್ಥಾನದಲ್ಲಿ ದೀಪ ಹಚ್ಚದಂತೆ ತಡೆಯಲು ಸಹಿ ಹಾಕಿದ್ದಾರೆ. ಇದು ಯಾವ ರೀತಿ ನಡೆ? ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನಿಸಿದರು.
ಗಾಯತ್ರಿ ಸಿದ್ದೇಶ್ವರ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು.