ಕನ್ನಡಪ್ರಭ ವಾರ್ತೆ ಮಡಿಕೇರಿ
ಲೋಕಸಭಾ ಚುನಾವಣೆಯಲ್ಲಿ ಸೋಲುವ ಆತಂಕ ಎದುರಿಸುತ್ತಿರುವ ಬಿಜೆಪಿ ಪ್ರಮುಖರು, ಇತ್ತೀಚೆಗೆ ಒಕ್ಕಲಿಗರ ಸಭೆಯಲ್ಲಿ ಉಪಮುಖ್ಯಮಂತ್ರಿ ಪಾಲ್ಗೊಂಡಿರುವುದಕ್ಕೆ ಜಾತಿಯ ಲೇಪನವನ್ನು ನೀಡಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಜಿಲ್ಲೆಗೆಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೇಟಿ ನೀಡಿದ ಸಂದರ್ಭ, ಒಕ್ಕಲಿಗ ಸಮಾಜದ ಸಮಸ್ಯೆಗಳನ್ನು ಅವರ ಮುಂದಿಡುವ ಪ್ರಯತ್ನವಾಗಿಯಷ್ಟೆ ಒಕ್ಕಲಿಗ ಸಮಾಜದ ಸಭೆ ನಡೆದಿತ್ತು ಎಂದು ಸ್ಪಷ್ಟಪಡಿಸಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳ ಬಳಿಕ ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದ ಎಂ.ಲಕ್ಷ್ಮಣ್ಅವರಿಗೆ ಟಿಕೆಟ್ ದೊರಕಿದೆ. ಇವರು ಒಕ್ಕಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವ ಸಂದರ್ಭ, ಸಹಜವಾಗಿ ಎಂಬಂತೆ ಸಮೂಹದ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಅವರು ಒಕ್ಕಲಿಗ ಸಮಾಜದ ಮಂದಿ ಪ್ರಬುದ್ಧರಾಗಿದ್ದು, ಬಿಜೆಪಿ ಆರೋಪಗಳನ್ನು ಅರ್ಥೈಸಿಕೊಳ್ಳಬಲ್ಲರು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರು ಬಿಜೆಪಿ ಅಭ್ಯರ್ಥಿಗೆ ಮುಕ್ತವಾಗಿ ಪ್ರಚಾರ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರ ಸಭೆಗೂ ಹಾಜರಾಗಿಲ್ಲವೆ ಎಂದು ಪ್ರಶ್ನಿಸಿದರು.ಜಾತಿ ರಾಜಕಾರಣದ ಆರೋಪ ಮಾಡುವ ಬಿಜೆಪಿ ಸ್ವತಃ ಜಾತಿ, ಧರ್ಮಗಳನ್ನು ಎತ್ತಿಕಟ್ಟುವ ಮೂಲಕ ತನ್ನ ರಾಜಕೀಯನಡೆಸಿಕೊಂಡು ಬರುತ್ತಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಆತಂಕದಿಂದ ಬಿಜೆಪಿ ಆರೋಪಗಳನ್ನು ಮಾಡುತ್ತಿದೆಯೆಂದು ಕೊಲ್ಯದ ಗಿರೀಶ್ ತಿಳಿಸಿದರು.ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ ದಾಸ್ಮಾತನಾಡಿ, ಬಿಜೆಪಿ ಚುನಾವಣಾ ಹಿನ್ನೆಲೆಯಲ್ಲಿ ಅರೆಭಾಷಿಕ ಒಕ್ಕಲಿಗ ಸಮೂಹವನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿ ಹೇಳಿಕೆಗಳನ್ನು ನೀಡುತ್ತಿದೆ. ಈ ಬಾರಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ತು ಮೊಣ್ಣಪ್ಪ, ಕಾಂಗ್ರೆಸ್ ವೃತ್ತಿ ಪರ ಘಟಕದ ಅಧ್ಯಕ್ಷ ಅಂಬೆಕಲ್ ನವೀನ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ಸಂಪಾಜೆ ವಲಯದ ಅಧ್ಯಕ್ಷ ಪಿ.ಎಲ್.ಸುರೇಶ್ ಸುದ್ದಿಗೊಷ್ಠಿಯಲ್ಲಿದ್ದರು.