ಬಿಜೆಪಿಗರಿಂದ ಸರ್ಕಾರ, ಸಿಎಂ ಡಿಕೆ ಅಣಕು ಶವಯಾತ್ರೆ

KannadaprabhaNewsNetwork |  
Published : Sep 25, 2026, 02:00 AM IST
೨೩ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ಮಾತನಾಡಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಆರ್ಥಿಕವಾಗಿ ಮುಗಟ್ಟು ಸ್ಥಿತಿ ಅನುಭವಿಸುತ್ತಿದೆ. ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಬಿಜೆಪಿಗರು ರಾಜ್ಯಾದ್ಯಂತ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಆರ್ಥಿಕವಾಗಿ ಮುಗಟ್ಟು ಸ್ಥಿತಿ ಅನುಭವಿಸುತ್ತಿದೆ. ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಬಿಜೆಪಿಗರು ರಾಜ್ಯಾದ್ಯಂತ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ಮಾಡಿದರು.

ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರು ಗೋವಿಂದ, ಗೋವಿಂದ ಎಂದು ಕೂಗುತ್ತ, ರಾಜ್ಯ ಸರ್ಕಾರ ಬದುಕಿದ್ದು ಸತ್ತಂತೆ ಇದೆ. ಕಾಂಗ್ರೆಸ್‌ ಬಡವರ ವಿರೋಧಿ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಹಾಗೂ ಕೊಪ್ಪಳದಲ್ಲಿ ಬಸವೇಶ್ವರ ವೃತ್ತದಲ್ಲಿ ಬಿಜೆಪಿಯ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಇತ್ತೀಚಿನ ಹಣಕಾಸು ಇಲಾಖೆಯ ಪತ್ರದಿಂದ ತಿಳಿದಿದೆ ಎಂದರು.ಬೀದರ್‌ನ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ನೇತೃತ್ವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಅವರ ಅಣುಕು ಶವಯಾತ್ರೆ ನಡೆಸಲು ಮುಂದಾದಾಗ ಪೊಲೀಸರು ತಡೆದರು, ಆಗ ಪಕ್ಷದ ಕಾರ್ಯಕರ್ತನನ್ನೇ ಹೆಗಲ ಮೇಲೆ ಹೊತ್ತು ಅಣಕು ಶವಯಾತ್ರೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಅತ್ತ ರಾಯಚೂರಿನಲ್ಲಿ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ರಚಿಸಿ ಅದರ ಮುಂದೆ ಕುಳಿತು ಬಾಯಿ ಬಡಿದುಕೊಂಡು, ಘೋಷಣೆಗಳನ್ನು ಕೂಗಿ ನಂತರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರ ವಿವಿಧ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರು. ಬಾಕಿ ಉಳಿಸಿಕೊಂಡಿದೆ. ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು ಹಣವಿಲ್ಲದ ಪರಿಸ್ಥಿತಿಯಲ್ಲೂ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯು ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ದೂರಿದರು.

ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಚೊಂಬು ಹಿಡಿದು, ಅಣಕು ಶವಯಾತ್ರೆ ಮಾಡಿ ಧಿಕ್ಕಾರ ಕೂಗಿದರು. ಮಂಡ್ಯದ ಜಯಚಾಮರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು, ಚೊಂಬು, ಕಾಯಿಕಂಠ ಮತ್ತು ಖಾಲಿ ಪೆಟ್ಟಿಗೆಯೊಂದಿಗೆ ರಸ್ತೆಗಿಳಿದು ಕೆಲಕಾಲ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಚಿವ ಶಿವಲಿಂಗೇಗೌಡ ಅವರು ಹೇಳಿದ್ದಾರೆನ್ನಲಾದ ಲಂಚದ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು, ‘ಕಾಂಗ್ರೆಸ್ ನಂಬಿದ್ರೆ ಬೊಂಬು ಗ್ಯಾರಂಟಿ, ಖಜಾನೆ ಕಾಸಿಲ್ಲ, ಬರೀ ಸೌಂಡು ಮಾತ್ರ, ಡಿ.ಕೆ.ಶಿವಕುಮಾರ್‌ ಬಿಟ್ಟಿ ಘೋಷಣೆಗೆ ಬರವಿಲ್ಲ. ಜನರ ಕಿವಿಮೇಲೆ ಹೂವಿಟ್ಟ ಡಿ.ಕೆ.ಶಿವಕುಮಾರ್‌, ಬೊಕ್ಕಸ ಖಾಲಿ ಖಾಲಿ, ಡಿ.ಕೆ.ಸರ್ಕಾರ ದಿವಾಳಿ’ ಎಂಬಿತ್ಯಾದಿ ಘೋಷಣೆಗಳನ್ನು ಬರೆದಿದ್ದ ಭಿತ್ರಪತ್ರಗಳನ್ನು ಹಿಡಿದು ಮೆರವಣಿಗೆ ಹೊರಟರು.

ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ, ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ರಾಜ್ಯ ಸರ್ಕಾರ ಅಣಕು ಶವಯಾತ್ರೆ ಆರಂಭಿಸಿದರು. ಪೊಲೀಸರು ಅಣಕು ಶವ ವಶಪಡಿಸಿಕೊಳ್ಳಲು ಮುಂದಾದಾಗ ಪೊಲೀಸರು, ಪ್ರತಿಭಟನಾನಿರತರ ನಡುವೆ ತಳ್ಳಾಟ, ನೂಕಾಟ ನಡೆದು ಪೊಲೀಸರು ಅಣಕು ಶವ ವಶಕ್ಕೆ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪರಿಹಾರ ಕಾಮಗಾರಿ ಕೈಗೊಳ್ಳಿ: ಪ್ರದೀಪ ಶೆಟ್ಟರ್‌
ರೈತರ ಬಿತ್ತನೆಗೆ ಬಿಸ್ಮಿಲ್ಲಾಹ ಬಲ: 28ಕ್ಕೂ ಹೆಚ್ಚು ಹೊಸ ಯಂತ್ರಗಳ ಸಿದ್ಧತೆ