ಚಿಕ್ಕೋಡಿ, ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲಲೇಬೇಕು: ಅಗರವಾಲ್

KannadaprabhaNewsNetwork | Published : Apr 8, 2024 1:06 AM

ಸಾರಾಂಶ

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್‌ದಾಸ್​​ ಅಗರವಾಲ್​​ ಜಿಲ್ಲೆಯ ಬಿಜೆಪಿ ನಾಯಕರಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿರುವ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನ್‌ದಾಸ್​​ ಅಗರವಾಲ್​​ ಜಿಲ್ಲೆಯ ಬಿಜೆಪಿ ನಾಯಕರಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿ ಶನಿವಾರ ರಾತ್ರಿ ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರಗಳ ಮುಖಂಡರ ಪ್ರತ್ಯೇಕ ಸಭೆ ನಡೆಸಿ, ವ್ಯಕ್ತಿಗಿಂತ ಪಕ್ಷ ಮುಖ್ಯ. ಈ ಹಿನ್ನೆಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ಬದಿಗೊತ್ತಿ ಪಕ್ಷ ಸೂಚಿಸಿರುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಒಂದು ಕ್ಷಣವನ್ನೂ ಹಾಳು ಮಾಡದೇ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಮೋದಿ ಸರ್ಕಾರ,‌ ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಿಳಿ ಹೇಳಬೇಕು. ಮೋದಿ ಸರ್ಕಾರ ಎಲ್ಲ ವರ್ಗದವರಿಗೆ ಜಾರಿಗೊಳಿಸಿದ್ದ ಯೋಜನೆಗಳ ಮಹತ್ವದ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಭೆಯ ಬಳಿಕ ಬೆಳಗಾವಿ ಹಾಗೂ ಚಿಕ್ಕೋಡಿ ಕೋರ್​ ಕಮಿಟಿ ಸಭೆಯನ್ನು ರಾಜ್ಯ‌ ಚುನಾವಣೆ ‌ಉಸ್ತುವಾರಿ ಅಗರವಾಲ್ ನಡೆಸಿದರು. ಈ ‌ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ‌ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ‌ಕಡಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ದುರ್ಯೋಧನ ‌ಐಹೊಳೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬೆಳಗಾವಿ ಹಾಗೂ ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ಮರಾಠ ಮತಗಳು ಕೈತಪ್ಪಿ ಹೋಗದಂತೆ ನಿಗಾವಹಿಸಬೇಕು. ಸಮುದಾಯವಾರು ಮತ ಸೆಳೆಯಲು ‌ತಂತ್ರಗಾರಿಕೆ ರೂಪಿಸುವುದರ ಜತೆಗೆ ಎಲ್ಲ ಕ್ಷೇತ್ರಗಳಲ್ಲಿ ಬಹುಮತ ಕೊಡಲೇಬೇಕು ಎಂದು ಹಾಲಿ, ಮಾಜಿ ಶಾಸಕರಿಗೆ ಅಗರವಾಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Share this article