ಅನಿರೀಕ್ಷಿತ ದಾಳಿ ನಡೆಸಿ ಅಕ್ರಮ ಮದ್ಯ ಸಾಗಣೆ ತಪಾಸಣೆ ನಡೆಸಿ-ಜಿಲ್ಲಾಧಿಕಾರಿ

KannadaprabhaNewsNetwork | Published : Apr 8, 2024 1:06 AM

ಸಾರಾಂಶ

ತಂಡಗಳನ್ನು ರಚಿಸಿಕೊಂಡು ಅನಿರೀಕ್ಷಿತ ದಾಳಿ ಮೂಲಕ ಅಕ್ರಮ ಮದ್ಯ ಮಾರಾಟ ಮತ್ತು ಸಂಗ್ರಹಣೆ ಪ್ರಕರಣಗಳ ಪತ್ತೆಮಾಡಿ, ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಬೇಕು. ಹೆದ್ದಾರಿಗಳಲ್ಲಿ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಮದ್ಯ ಸಾಗಾಣಿಕೆ ಕುರಿತು ತೀವ್ರ ತಪಾಸಣೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಹಾವೇರಿ: ತಂಡಗಳನ್ನು ರಚಿಸಿಕೊಂಡು ಅನಿರೀಕ್ಷಿತ ದಾಳಿ ಮೂಲಕ ಅಕ್ರಮ ಮದ್ಯ ಮಾರಾಟ ಮತ್ತು ಸಂಗ್ರಹಣೆ ಪ್ರಕರಣಗಳ ಪತ್ತೆಮಾಡಿ, ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಬೇಕು. ಹೆದ್ದಾರಿಗಳಲ್ಲಿ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಮದ್ಯ ಸಾಗಾಣಿಕೆ ಕುರಿತು ತೀವ್ರ ತಪಾಸಣೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಅಕ್ರಮಗಳ ಕುರಿತು ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.ರಾಜಕೀಯ ಪಕ್ಷಗಳ ಸಭೆ-ಸಮಾರಂಭ ನಡೆಸಲು ಸಹಾಯಕ ಚುನಾವಣಾಧಿಕಾರಿಗಳಿಂದ ಸುವಿಧಾ ತಂತ್ರಾಂಶದ ಮೂಲಕ ಅನುಮತಿ ನೀಡಿದ ವಿವರಗಳನ್ನು ಪಡೆದುಕೊಂಡು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಎಫ್.ಎಸ್.ಟಿ. ತಂಡ ಸಮನ್ವಯದಿಂದ ಸಭೆ-ಸಮಾರಂಭ ಸ್ಥಳಗಳಲ್ಲಿ ಕೂಪನ್ ಮೂಲಕ ಅಕ್ರಮ ಮದ್ಯ ಹಂಚಿಕೆ ಕುರಿತು ನಿಗಾ ವಹಿಸಬೇಕು. ಚುನಾವಣಾ ಅಕ್ರಮಗಳ ಕುರಿತು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ಸೂಚನೆ ನೀಡಿದರು.ಒಂದೇ ವ್ಯಕ್ತಿ ಖಾತೆಯಿಂದ ಹಲವಾರು ವ್ಯಕ್ತಿಗಳ ಖಾತೆಗೆ ಆರ್.ಟಿ.ಜಿ.ಎಸ್ ಹಾಗೂ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವುದು, ನಗದು ಠೇವಣಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ನಗದು ಹಿಂಪಡೆಯುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಬ್ಯಾಂಕ್ ಖಾತೆಯ ವಹಿವಾಟಿನ ವಿವರ ಪಡೆಯಬೇಕು. ಒಂದು ವೇಳೆ ಅಕ್ರಮ ಕಂಡುಬಂದಲ್ಲಿ ಸೂಕ್ತಕೈಗೊಳ್ಳಬೇಕು. ಸಹಕಾರಿ ಬ್ಯಾಂಕುಗಳು, ಧರ್ಮಸ್ಥಳ ಸಹಕಾರಿ ಸಂಘಗಳು ಹಾಗೂ ಇನ್ನಿತರೆ ಸಹಕಾರಿ ಸಂಘಗಳ ಹಣಕಾಸು ವಹಿವಾಟಿನ ಮಾಹಿತಿ ಪಡೆದುಕೊಂಡು ತೀವ್ರ ನಿಗಾ ವಹಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮೊತ್ತ ರು.೧೦ ಲಕ್ಷಕ್ಕಿಂತ ಅಧಿಕವಾಗಿದ್ದಲ್ಲಿ ಅಂತಹ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಆದಾಯ ತೆರಿಗೆ ಅಧಿಕಾರಿಗಳು ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಹಾಗೂ ವೆಚ್ಚನಿಗಾ ಸಮಿತಿ ನೋಡಲ್ ಅಧಿಕಾರಿ ವಸಂತಕುಮಾರ್ ಮಾತನಾಡಿ, ಅನುಮಾನಾಸ್ಪದವಾಗಿ ಹಣ ವರ್ಗಾವಣೆ ಕಂಡುಬಂದ ಬ್ಯಾಂಕುಗಳಿಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಬೇಕು. ಲೋಕಸಭೆ ಸಾರ್ವತ್ರಿಕ ಚುನಾವಣೆ ಮುಕ್ತ, ನ್ಯಾಯಸಮ್ಮತವಾಗಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಂತೆ ಯಶಸ್ವಿಯಾಗಿ ನಡೆಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಅಬಕಾರಿ ಇಲಾಖೆ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article