ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಲು ಹೊರಟಿರುವ ಹಿಂದು ಸಂಘಟಕ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲಗೆ ಬಿಜೆಪಿ ಸೇರ್ಪಡೆಗೆ ಬಹಿರಂಗ ಆಹ್ವಾನ ನೀಡಿದೆ. ಹೀಗಾಗಿ ಬಿಜೆಪಿ ಸೇರ್ಪಡೆಯ ಚೆಂಡು ಈಗ ಅರುಣ್ ಕುಮಾರ್ ಪುತ್ತಿಲ ಅಂಗಳದಲ್ಲಿದೆ.ಮಂಗಳೂರಿನಲ್ಲಿ ಶನಿವಾರ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಸೇರ್ಪಡೆಯಾದರೆ ಅರುಣ್ ಕುಮಾರ್ ಪುತ್ತಿಲಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆ ಕುರಿತಂತೆ ನಾನಾ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಪುತ್ತಿಲ ಕರೆಗೆ ಬಿಜೆಪಿ ಸ್ಪಂದಿಸುತ್ತಿಲ್ಲ, ಸ್ಥಳೀಯ ಮುಖಂಡರು ಪುತ್ತಿಲರನ್ನು ದೂರ ಇರಿಸುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತುಗಳು ಸತ್ಯಕ್ಕೆ ದೂರವಾಗಿದೆ. ಹಾಗಾಗಿ ಸ್ಥಳೀಯ ಮುಖಂಡರನ್ನು ಸೇರಿಸಿ, ಅವರೆಲ್ಲರ ಒಮ್ಮತದ ಅಭಿಪ್ರಾಯ ಪಡೆದೇ ಪುತ್ತಿಲರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದೆ ಎಂದರು. ಅರುಣ್ ಪುತ್ತಿಲ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿಗಳು ಮತ್ತು ಹಿರಿಯರು ಹಲವು ಬಾರಿ ಮಾತುಕತೆ ನಡೆಸಿದ್ದಾರೆ, ಅವರೆಲ್ಲರೂ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತವಾದ ಆಹ್ವಾನ ನೀಡಿದ್ದಾರೆ ಎಂಬುದನ್ನು ಸ್ವತಃ ರಾಜ್ಯಾಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಕಾಲಹರಣ ಮಾಡಿಲ್ಲ. ಕೇವಲ ಪುತ್ತಿಲ ಮಾತ್ರವಲ್ಲ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರುವ ಎಲ್ಲರಿಗೂ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ ಇದೆ. ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರ ಕರೆ ಮೇರೆಗೆ ಬಿಜೆಪಿ ಸೇರ್ಪಡೆಗೊಳ್ಳುವವರಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದರು. ಅರುಣ್ ಕುಮಾರ್ ಪುತ್ತಿಲ ಅವರು ಈ ಹಿಂದೆ ಬಿಜೆಪಿಯಲ್ಲಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ ಬಳಿಕ ಸಹಜವಾಗಿಯೇ ಪಕ್ಷದಿಂದ ದೂರವಾಗಿದ್ದಾರೆ. ರಾಜ್ಯಾಧ್ಯಕ್ಷರ ಭೇಟಿ ವೇಳೆ ಅರುಣ್ ಪುತ್ತಿಲ ಅವರು ಪಕ್ಷದಲ್ಲಿ ಜಿಲ್ಲೆ ಅಥವಾ ಮಂಡಲದ ಅಧ್ಯಕ್ಷ ಸ್ಥಾನದ ಅಪೇಕ್ಷೆ ಇರಿಸಿದ್ದಾರೆ. ಬಿಜೆಪಿ ಸೇರ್ಪಡೆ ವೇಳೆ ಯಾವುದೇ ಷರತ್ತು, ಒತ್ತಡ ಇರಿಸುವ ಕ್ರಮವಿಲ್ಲ. ಪ್ರತಿಯೊಬ್ಬರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆಯಾಗಬೇಕು. ಆ ಬಳಿಕ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ನಿರ್ಣಯ ಮಾಡಲಾಗುತ್ತದೆ. ಹಾಗೆಯೇ ಅರುಣ್ ಪುತ್ತಿಲರಿಗೂ ಬಿಜೆಪಿ ಸೇರ್ಪಡೆ ನಂತರ ಅವರಿಗೆ ಸಲ್ಲಬೇಕಾದ ಎಲ್ಲ ಗೌರವಗಳೊಂದಿಗೆ ಸ್ಥಾನಮಾನ ನೀಡಲಾಗುವುದು. ಈಗಲೂ ಪುತ್ತಿಲ ಜತೆ ಬಿಜೆಪಿ ಸಂಪರ್ಕದಲ್ಲಿದ್ದು, ಶೀಘ್ರವೇ ಅವರು ಬಿಜೆಪಿ ಸೇರುವ ವಿಶ್ವಾಸ ಇದೆ ಎಂದರು. ಪುತ್ತಿಲ ಕೂಡ ರಾಷ್ಟ್ರೀಯ ವಿಚಾರಧಾರೆ ಹೊಂದಿರುವ, ಬಿಜೆಪಿಯ ತತ್ವಸಿದ್ಧಾಂತವನ್ನು ಬಲ್ಲವರಾಗಿದ್ದು, ಅವರು ಪಕ್ಷಕ್ಕೆ ಬಂದರೆ, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಸಹಕಾರಿಯಾಗುತ್ತದೆ ಎಂದರು. ಒಂದು ವೇಳೆ ಬಿಜೆಪಿಯ ಮುಕ್ತ ಆಹ್ವಾನ ತಿರಸ್ಕರಿಸಿದರೆ, ಮುಂದೆ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಚುನಾವಣೆ ಮೂಲಕವೇ ಪಕ್ಷೇತರ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂದು ಸತೀಶ್ ಕುಂಪಲ ಹೇಳಿದರು. ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ವಿದ್ಯಾ ಗೌರಿ, ಪುರುಷೋತ್ತಮ, ಗಿರೀಶ್, ಪ್ರಭಾರಿಗಳಾದ ಪ್ರೇಮಾನಂದ ಶೆಟ್ಟಿ, ಸುನಿಲ್, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ್, ವಕ್ತಾರ ವಸಂತ ಜೆ.ಪೂಜಾರಿ ಮತ್ತಿತರರಿದ್ದರು.