ಡಿಕೆಶಿ ಭಾವಚಿತ್ರಕ್ಕೆ ಮೊಟ್ಟೆ ತೂರಿ ಆಕ್ರೋಶ, ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಜಾರಿ ಮಾಡುವುದಕ್ಕಾಗಿ ಸಂವಿಧಾನ ಬದಲಿಸಲು ಸಿದ್ಧ ಎಂದು ಹೇಳಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಗಳವಾರ ತೀವ್ರ ಪ್ರತಿಭಟನೆ ನಡೆಸಿದರು.
ಡಿ.ಕೆ. ಶಿವಕುಮಾರ್ ಅವರ ಪ್ರತಿಕೃತಿ ದಹಿಸಲು ಯತ್ನಿಸಿದಾಗ ಪೊಲೀಸರು ತಡೆದರು. ಅಷ್ಟಕ್ಕೂ ಸುಮ್ಮನಾಗದ ಪ್ರತಿಭಟನಾ ಕಾರರು ಅನ್ನಭಾಗ್ಯ ಪ್ಲೆಕ್ಸ್‌ನಲ್ಲಿರುವ ಡಿಕೆಶಿ ಅವರ ಭಾವಚಿತ್ರಕ್ಕೆ ಮೊಟ್ಟೆ ಬೀಸಿದರು, ಕೆಲವರು ಕಲ್ಲು ತೂರಾಟ ಮಾಡಿದರು.ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನಾಕಾರರ ಗುಂಪೊಂದು ಡಿಕೆಶಿ ಅವರ ಪ್ರತಿಕೃತಿ ದಹಿಸಲು ಯತ್ನಿಸಿತು. ಆಗ ಸ್ಥಳದಲ್ಲಿದ್ದ ಪೊಲೀಸರು ಪ್ರತಿಕೃತಿ ಹಾಗೂ ಪೆಟ್ರೋಲ್ ಬಾಟಲಿ ಕಸಿದುಕೊಂಡರು. ಪ್ರತಿಕೃತಿ ದಹಿಸಲು ತಡೆಯೊಡ್ಡಿದ ಪೊಲೀಸ್ ಅಧಿಕಾರಿಗಳ ಜತೆ ಕಾರ್ಯಕರ್ತರು ತೀವ್ರ ವಾಗ್ವಾದ ನಡೆಸಿದರು. ಕಾಂಗ್ರೆಸ್‌ಗೆ ಒಂದು ನ್ಯಾಯ, ಬಿಜೆಪಿಗೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಪೊಲೀಸರು ಕಾಂಗ್ರೆಸ್ ಕೈಗೊಂಬೆ ಯಂತೆ ವರ್ತಿಸುವುದು ಬಿಡಬೇಕು. ಜನ ಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಕಾಂಗ್ರೆಸ್ ಹುಟ್ಟುಗುಣವೇ ಸಂವಿಧಾನ ತಿದ್ದುಪಡಿ ಮಾಡುವುದು. ದೇಶದ ಇತಿಹಾಸ ಪುಟ ಗಮನಿಸಿದರೆ ಅನೇಕ ಬಾರಿ ಕಾಂಗ್ರೆಸ್ ಆಡಳಿತಕ್ಕೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಿ ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಮಣ್ಣುಪಾಲು ಮಾಡಿದೆ. ಇದೀಗ ರಾಜಕೀಯ ದೊಂಬ ರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸುವ ಹಕ್ಕು ದೇಶದ ಪ್ರತಿಯೊಬ್ಬರಿಗಿದೆ. ಆದರೆ, ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳು ಬಳಸಿಕೊಂಡು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ, ಶಾಸಕರ ನಡುವೆ ಹೊಂದಾಣಿಕೆ ಕೊರತೆಯಿದೆ. ಐದು ವರ್ಷಗಳು ಪೂರೈಸದೇ ಸದ್ಯದಲ್ಲೇ ಸರ್ಕಾರ ಪಥನಗೊಳ್ಳಲಿದೆ ಎಂದು ಹೇಳಿದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ದಲಿತರು, ಶೋಷಿತರು ಹಾಗೂ ಬಡವರ ಪರವೆಂದು ರಾಜ್ಯದ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಕೋಟ್ಯಂತರ ಹಣವನ್ನು ಗ್ಯಾರಂಟಿಗೆ ಬಳಸಿ ಅಪಮಾನಿಸಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಅತಿ ಹೆಚ್ಚು ದ್ರೋಹವೆಸಗಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.