ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಭಾರತದ ಸಂವಿಧಾನಕ್ಕೆ ವಿರುದ್ಧವಿದ್ದು, ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ 19(1)ಪರಿಚ್ಛೇದ, (2)ಪರಿಚ್ಛೇದದಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.
ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ಈ ವಿಧೇಯಕ ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದು ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ಈ ಕಾಯ್ದೆ ಜಾರಿಯಾಗುವುದರಿಂದ ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ ಮಾತ್ರವಲ್ಲ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವಾಗಿದೆ. ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳು ಮಟ್ಟದ ಕಾಯಿದೆ ನಮಗೆ ಬೇಕೇ ? ಎಂಬ ಪ್ರಶ್ನೆ ಮೂಡಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂತಹ ಕಾಯಿದೆ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದರು.
ಮಹಿಳಾ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್ ಮಾತನಾಡಿ, ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂತಹ ಕಾಯಿದೆ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದರು.