ಸುಹಾಸ್‌ ಹತ್ಯೆಗೆ ಬಜಪೆ ಪೊಲೀಸರ ಸಹಕಾರ: ಶಾಸಕ ಉಮಾನಾಥ ಕೋಟ್ಯಾನ್‌ ಆರೋಪ

KannadaprabhaNewsNetwork |  
Published : May 08, 2025, 12:31 AM IST
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ | Kannada Prabha

ಸಾರಾಂಶ

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ನೇರ ಕೈವಾಡವಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ಜತೆಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ನೇರ ಕೈವಾಡವಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ಜತೆಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಸಮಗ್ರ ತನಿಖೆಗಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಹತ್ಯೆ ನಡೆದ ಸ್ಥಳದಲ್ಲಿ ೨೫ ಮಂದಿ ಇದ್ದು, ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ. ಸುತ್ತಲೂ ಕೋಟೆ ನಿರ್ಮಾಣ ಮಾಡಿ ಸುಹಾಸ್ ಹತ್ಯೆ ನಡೆಸಲು ಬಿಟ್ಟಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಈ ಹತ್ಯೆ ನಡೆದಿದೆ. ಬುರ್ಖಾಧಾರಿ ಮಹಿಳೆಯರೂ ಆರೋಪಿಗಳನ್ನು ಪಾರು ಮಾಡಿದ್ದಾರೆ. ಹತ್ಯೆಗೂ ಮುನ್ನವೇ ಪೊಲೀಸರು ಹಾಗೂ ಆರೋಪಿಗಳ ನಡುವೆ ಒಡಂಬಡಿಕೆ ಆಗಿತ್ತು. ಆದ್ದರಿಂದಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿ ಅವರ ರಕ್ಷಣೆಗೆ ಮುಂದಾಗಿಲ್ಲ. ಒಡಂಬಡಿಕೆಯ ಭಾಗವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಗೆ ಆಗಮಿಸಿದ ಗೃಹ ಸಚಿವರು, ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಭೆಗೆ ಆಹ್ವಾನಿಸಿಲ್ಲ. ಆದರೆ, ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೂ ತೆರಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಜಪೆಯಲ್ಲಿ ಹಿಂದುವಿನ ಕೊಲೆ ಆಗಿದೆ. ಆದರೆ, ಪೊಲೀಸರು ರಾತ್ರಿ ವೇಳೆ ಮಹಿಳೆಯರು ಇರುವ ಹಿಂದುಗಳ ಮನೆ ಮೇಲೆಯೇ ದಾಳಿ ನಡೆಸಿ ಬೆದರಿಸುತ್ತಿದ್ದಾರೆ. ಮೂಡುಶೆಡ್ಡೆಯಲ್ಲಿ ಪ್ರದೀಪ್ ಎಂಬವರ ಮನೆಗೆ, ಕಳವಾರಿನ ಮನೆಯೊಂದಕ್ಕೆ ರಾತ್ರಿ ಪೊಲೀಸರು ತೆರಳಿದ್ದಾರೆ. ಯಾವ ಮುಸಲ್ಮಾನರ ಮನೆಗೂ ಪೊಲೀಸರು ರಾತ್ರಿ ಹೋಗಿಲ್ಲ ಎಂದರು.ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ರೌಡಿಶೀಟರ್ ಎಂದು ಆರೋಪಿಸಲಾಗುತ್ತಿದೆ. ಒಂದು ಪ್ರಕರಣವಿದ್ದರೂ ಪೊಲೀಸರು ರೌಡಿಶೀಟರ್ ಹಾಕುತ್ತಾರೆ. ಹಾಗಿದ್ದಲ್ಲಿ ರೌಡಿಶೀಟರ್‌ನನ್ನು ಕೊಲ್ಲಲು ಪೊಲೀಸರು ರೌಡಿಗಳನ್ನು ಕಳುಹಿಸಬಹುದೇ ಎಂದು ಅವರು ಪ್ರಶ್ನಿಸಿದರು.ಸ್ಪೀಕರ್ ಸ್ಥಾನದಲ್ಲಿದ್ದವರು ರಾಜಕೀಯ ಮಾಡಬಾರದು. ಆದರೆ, ಯು.ಟಿ. ಖಾದರ್ ಅವರು ಸದಾ ಸುದ್ದಿಗೋಷ್ಠಿ ನಡೆಸುತ್ತಿರುತ್ತಾರೆ. ಫಾಜಿಲ್‌ ಕುಟುಂಬದ ಪರವಾಗಿ ಮಾತನಾಡಿದ ಖಾದರ್, ಫಾಜಿಲ್‌ ಸಹೋದರ ಆರೋಪಿಯಾದ ಬಗ್ಗೆ ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

ಶಾಸಕ ಹರೀಶ್ ಪೂಂಜಾ ಅವರ ಶಾಸಕ ಸ್ಥಾನ ಅನರ್ಹತೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅವರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗುತ್ತಿದೆ. ಪೂಂಜಾ ಅವರನ್ನು ಅನರ್ಹಗೊಳಿಸಿ ನೋಡಲಿ ಎಂದು ಉಮಾನಾಥ ಕೋಟ್ಯಾನ್‌ ಸವಾಲು ಹಾಕಿದರು.ವಿಧಾನ ಪರಿಷತ್ ಸದಸ್ಯ ಕಿಶೋರ್‌ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ, ಮುಖಂಡರಾದ ಈಶ್ವರ ಕಟೀಲ್, ದಿನೇಶ್, ರಂಜಿತ್, ರಾಜೇಶ್, ವಿಜಯ್, ಅರುಣ್ ಶೇಟ್ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌