ಕನ್ನಡಪ್ರಭ ವಾರ್ತೆ ಹಾವೇರಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿ ಮೇರೆ ಮೀರಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಜನ ವಿರೋಧಿ ಹಾಗೂ ಭ್ರಷ್ಟಾಚಾರದಿಂದ ಕೂಡಿರುವ ಆಡಳಿತದಲ್ಲಿ ಕೂಡಿದೆ. ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಕಾಂಗ್ರೆಸ್ ಕೃಪಾಪೋಷಿತ ಬಿಲ್ಡರ್‌ಗಳು ಹಾಗೂ ಬಿಬಿಎಂಪಿ ಸದಸ್ಯರ ಮನೆಯ ಮೇಲೆ ಐಟಿ ದಾಳಿಯಾಗಿದ್ದು ಸುಮಾರು ೮೫ ಕೋಟಿ ರು.ಗೂ ಹೆಚ್ಚು ನಗದು ಪತ್ತೆಯಾಗಿದೆ. ಇದು ಸರ್ಕಾರದ ಕೆಲಸಗಳಿಗೆ ಬಿಲ್ ಪಾಸ್ ಮಾಡಲು ಪಡೆದಿರುವ ಕಮಿಷನ್ ಎಂಬ ಸತ್ಯ ಇಡೀ ರಾಜ್ಯದ ಜನತೆಗೆ ತಿಳಿದಿದೆ. ಇದರ ಜತೆಗೆ ಮೈಸೂರು ದಸರಾ ಉತ್ಸವದಲ್ಲಿ ಖ್ಯಾತ ಕಲಾವಿದ ಪಂಡಿತ ತಾರಾನಾಥ ಅವರಿಗೆ ಲಂಚದ ಬೇಡಿಕೆ ಇಟ್ಟಿದ್ದು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.
ಮಳೆಯಿಲ್ಲದೇ ಬರಗಾಲದಿಂದ ರಾಜ್ಯದ ರೈತ ಕಂಗಾಲಾಗಿದ್ದು, ಅನೇಕ ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಿದರೂ ಸರ್ಕಾರ ರೈತರ ನೆರವಿಗೆ ಬಂದಿಲ್ಲ. ರೈತರಿಗೆ ಪರಿಹಾರ ಸಂದಾಯ ಮಾಡದೆ ಇರುವುದು ಖಂಡನೀಯ. ದಿನಕ್ಕೆ ಕೇವಲ ೫ ಗಂಟೆಗಳ ವಿದ್ಯುತ್‌ನ್ನು ಸರಬರಾಜು ಮಾಡುತ್ತಿದ್ದು, ಈ ೫ ಗಂಟೆಗಳ ಕಾಲ ಸಹ ಕಡಮೆ ವೋಲ್ಟೇಜ್ ನೀಡಲಾಗುತ್ತಿದೆ. ಇದರಿಂದ ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ತುಷ್ಟಿಕರಣ ರಾಜಕೀಯ, ಭ್ರಷ್ಟಾಚಾರ ಯುಕ್ತ ಆಡಳಿತ, ಸ್ವಜನ ಪಕ್ಷಪಾತ, ರೈತ ವಿರೋಧಿ ನೀತಿಗಳಿಂದ ಕರ್ನಾಟಕವನ್ನು ಅಧೋಗತಿಗೆ ತಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕು. ನೀಡದಿದ್ದರೆ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಬಸವರಾಜ ಕೋಳಿವಾಡ, ಪ್ರಕಾಶ ಪತ್ತಾರ, ಮಂಜುನಾಥ ತಾಂಡೂರ, ಬಸವರಾಜ ಡೊಂಕಣ್ಣನವರ, ನೀಲಪ್ಪ ಚಾವಡಿ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ಹುಲಗೂರ, ಗುಡ್ಡಪ್ಪ ಭರಡಿ, ನಾಗರಾಜ ಕೋಣನವರ, ಮಂಜುನಾಥ ಡೋಲೆ, ಮೃತ್ಯುಂಜಯ ಶೆಟ್ಟರ, ಹನುಮಂತಪ್ಪ ದಾಸರ, ಪ್ರಹ್ಲಾದಗೌಡ ಪಾಟೀಲ, ಪಕ್ಕಿರೇಶ ಹಾವನೂರ, ಜಗದೀಶ ಮಲಗೋಡ, ನಿರಂಜನ ಹೇರೂರ, ನಂಜುಂಡೇಶ ಕಳ್ಳೇರ, ವಿಜಯಕುಮಾರ ಕುಡ್ಲಪ್ಪನವರ, ಗಿರೀಶ ಶೆಟ್ಟರ, ವಿರುಪಾಕ್ಷಪ್ಪ ಹುಲ್ಲೂರ, ಶಿವಬಸವ ಹಾವಿನಾಳ, ಶಿವಯೋಗಿ ಹುಲಿಕಂತಿಮಠ, ಕಿರಣ ಕೋಣನವರ ಇತರರು ಇದ್ದರು.