ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ದುಃಖ, ಸಮಸ್ಯೆಯಲ್ಲಿರುವ ಪ್ರಪಂಚಕ್ಕೆ ಪ್ರಸನ್ನತೆ ಕೊಡುವವನು ವೇಣೂರಿನ ಗೊಮ್ಮಟೇಶ್ವರ ಎಂದು ಚಾಮರಾಜನಗರ ಜಿಲ್ಲೆ ಕನಕಗಿರಿ ಶ್ರೀ ಜೈನ ಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು. ಅವರು ಸೋಮವಾರ ಮುಂದಿನ ವರ್ಷ ಫೆಬ್ರವರಿ 22ರಿಂದ ಮಾರ್ಚ್ 1ರ ವರೆಗೆ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ ಅಟ್ಟಳಿಗೆಯ ಸ್ತಂಭ ನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಖಗೋಳ, ಭೂಗೋಳ, ವಾಸ್ತು ಎಲ್ಲದರಲ್ಲೂ ಅತ್ಯಂತ ಸುರಕ್ಷಿತ ಸ್ಥಳ ವೇಣೂರಾಗಿದ್ದು, ಇಲ್ಲಿಯ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕ ಕರ್ನಾಟಕದ ಮಹಾ ಉತ್ಸವ. ಇದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಬಹಿರಂಗದಲ್ಲಿ ನಾವು ಚೆನ್ನಾಗಿಲ್ಲದೆ ಇರುವುದರಿಂದ ನಾನಾ ಬಟ್ಟೆ ಬರೆ ಹಾಗೂ ಅಲಂಕಾರಗಳೊಂದಿಗೆ ಸಮಾಜದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಅಂತರಂಗದಲ್ಲಿ ಪರಮ ಪವಿತ್ರವಾಗಿದ್ದು ಸತ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಮೂಡಬಿದಿರೆ ಶ್ರೀ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವೇಣೂರಿನಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಆಧ್ಯಾತ್ಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಕಾರ್ಯಕ್ಕೆ ಪೂರಕವಾಗಿರಲಿ. ಬಾಹುಬಲಿ ನಾನು ತ್ಯಾಗ ಮಾಡಿದ್ದೇನೆ ನೀವೇನು ಮಾಡಿದ್ದೀರಿ ಎಂದು ಎತ್ತರದಲ್ಲಿ ನಿಂತು ನಮ್ಮನ್ನು ನೋಡುತ್ತಿದ್ದಾನೆ. ಭೂಮಿಗೆ ಬರುವಾಗ ಮತ್ತು ಹೋಗುವಾಗ ದಿಗಂಬರರಾಗಿರುತ್ತೇವೆ. ಇರುವ ಜೀವನದ ಮಧ್ಯೆ ನಾನಾ ವೇಷ ಧರಿಸಿ ಬದುಕುತ್ತೇವೆ. ಪರಸ್ಪರ ದ್ವೇಷ, ಯುದ್ಧದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತ್ಯಾಗದಿಂದ ಸುಖ, ಶಾಂತಿ, ಪ್ರಗತಿ ಮೈತ್ರಿಯಾಗಲು ಸಾಧ್ಯ. ಜಗತ್ತಿನ ಯುದ್ಧ ಕೊನೆಯಾಗಿ ಶಾಂತಿ ನೆಲೆಸಲಿ ಎಂದರು. ಕರ್ನಾಟಕ ಸರ್ಕಾರದ ಯೋಜನೆ ಮತ್ತು ಅಂಕಿ ಅಂಶಗಳ ಸಚಿವ ಡಿ. ಸುಧಾಕರ್ ಅಧ್ಯಕ್ಷತೆ ವಹಿಸಿ, ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕ ಲೋಕದ ಪುಣ್ಯದ ಕೆಲಸವಾಗಿದೆ. ಅದನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಈ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಟ್ಟಳಿಗೆಯ ಸ್ತಂಭ ನ್ಯಾಸವನ್ನು ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಜಿನ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದರು. ಕೋಲಾರ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪ ಸಿಂಹ ನಾಯಕ್ ಹಾಗೂ ಎಸ್.ಎಲ್. ಬೋಜೇಗೌಡ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಹಾಮಸ್ತಕಾಭಿಷೇಕ ಮಹೋತ್ಸವದ ಕೋಶಾಧಿಕಾರಿ ಜಯರಾಜ್ ಕಂಬಳಿ ಇದ್ದರು. ಸಚಿವ ಡಿ ಸುಧಾಕರ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಹಾಮಸ್ತಕಾಭಿಷೇಕ ಪ್ರಯುಕ್ತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ನೀಡಲಾಯಿತು. 2024ರ ವೇಣೂರು ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ ಅಜಿಲ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ನವೀನ್ ಚಂದ್ ಬಲ್ಲಾಳ್ ವಂದಿಸಿದರು. ತಕ್ಷಶಿಲೆಯಿಂದ ಮಣ್ಣು ತರುವ ಪ್ರಯತ್ನವಾಗಲಿ ತಕ್ಷಶಿಲೆ ಬಾಹುಬಲಿಯ ರಾಜಧಾನಿಯಾಗಿತ್ತು. ಆದರೆ ಇಂದು ಅದು ಪಾಕಿಸ್ತಾನದಲ್ಲಿದೆ. ಅಲ್ಲಿಂದ ಒಂದು ಹಿಡಿ ಮಣ್ಣು ತರಿಸಿದರೂ ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಸಾರ್ಥಕ ಕಾರ್ಯವಾಗುತ್ತದೆ. ಈ ದಿಸೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರ್ಕಾರದ ಮೂಲಕ ಪ್ರಯತ್ನ ಮಾಡಿಸಿದಲ್ಲಿ ಅದು ಅವಿಸ್ಮರಣೀಯವಾಗಿರಲು ಸಾಧ್ಯ ಎಂದು ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.