ವಿವಿಧ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಹೊದಿಗೆರೆ ರಮೇಶ್ ಎಚ್ಚರಿಕೆ । 21ಕ್ಕೆ ನಾಯಕ ಸಮಾಜದ ಶ್ರೀಗಳು, ಅಹಿಂದ ಸ್ವಾಮೀಜಿಗಳು ಭೇಟಿ ಕನ್ನಡಪ್ರಭವಾರ್ತೆ ಚನ್ನಗಿರಿ ಸರ್ಕಾರಿ ಅಧಿಕಾರಿಗಳೆಲ್ಲರೂ ಒಂದಾಗಿ ವಾಲ್ಮೀಕಿ ಮಹರ್ಷಿ ಪುತ್ಥಳಿ ತೆಗೆದಿದ್ದೀರಿ. ಇದರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿರುವುದು ತಿಳಿಯುತ್ತಿಲ್ಲ. ಎಲ್ಲರೂ ಸೇರಿ ಸಂತೋಷದಿಂದ ವಾಲ್ಮೀಕಿ ಜಯಂತಿ ಆಚರಿಸಬೇಕೆಂದರೆ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಕಾಲೇಜಿನ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಪುನರ್ ಪ್ರತಿಷ್ಠಾಪಿಸಬೇಕು ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ತಾಕೀತು ಮಾಡಿದ್ದಾರೆ. ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಚರಿಸುವ ಕನ್ನಡ ರಾಜ್ಯೋತ್ಸವ, ಶ್ರೀ ವಾಲ್ಮೀಕಿ ಜಯಂತಿ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಬಗ್ಗೆ ತಹಸೀಲ್ದಾರ್ ಎರ್ರಿಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪುತ್ಥಳಿ ಪ್ರತಿಷ್ಠಾಪಿಸಬೇಕೆಂಬ ವಿಚಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಎರಡು ಬಾರಿ ಸಾಮಾನ್ಯ ಸಭೆ ಮುಂದಕ್ಕೆ ಹಾಕಿದ್ದಾರೆ. ಅನಾವಶ್ಯಕವಾಗಿ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು. ಈಗಾಗಲೇ ಪುರಸಭೆ ಸಾಮಾನ್ಯ ಸಭೆ ಸೆ. 30, ಅ.11 ರಂದು ಕರೆದು ಸಭೆ ಮುಂದೂಡಿದ್ದಾರೆ. ಇದೇ ಸಾಮಾನ್ಯ ಸಭೆ ಅ.18ರಂದು ಸಭೆ ಕರೆದು ತೀರ್ಮಾನಿಸಿ ಪ್ರತಿಮೆ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. 21ರಂದು ನಾಯಕ ಸಮಾಜದ ಶ್ರೀಗಳ ಜೊತೆಯಲ್ಲಿ ರಾಜ್ಯದ ಎಲ್ಲಾ ಅಹಿಂದ ಶ್ರೀಗಳು ಪಟ್ಟಣಕ್ಕೆ ಬರಲಿದ್ದಾರೆ. ಅಷ್ಟರಲ್ಲಿ ತಾಲೂಕು ಆಡಳಿತ ಸೂಕ್ತ ನಿರ್ಧಾರ ತೆಗೆದುಕೊಂಡು 28ರಂದು ವಾಲ್ಮೀಕಿ ಜಯಂತಿ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು. ನಿವೃತ್ತ ಉಪನ್ಯಾಸಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ವೃತ್ತದಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಅವಕಾಶ ನೀಡದಿದ್ದರೆ ರಾಜ್ಯ ಮಟ್ಟದಲ್ಲಿ ನಡೆಯುವಂತಹ ವಾಲ್ಮೀಕಿ ಜಯಂತಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಪಿ.ಲೋಹಿತ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎರ್ರಿಸ್ವಾಮಿ, ಎಲ್ಲರೂ ಸಂತೋಷದಿಂದ ಕೂಡಿ ವಾಲ್ಮೀಕಿ ಜಯಂತಿ ಆಚರಿಸುವಂತಹ ಮತ್ತು ಎಲ್ಲರೂ ಒಪ್ಪುವ ತೀರ್ಮಾನ ದೊರೆಯಲಿದೆ ಎಂದು ಭರವಸೆ ನೀಡಿದರು. ತಾಲೂಕು ವಾಲ್ಮೀಕಿ ನಾಯಕ ಸಮಾಜದ ಪ್ರಮುಖರಾದ ಎನ್.ಎಚ್. ಜಯರಾಂ, ರಂಗನಾಥ್, ಗೋವಿಂದಸ್ವಾಮಿ, ಲೋಕೇಶಪ್ಪ, ಹನುಮಂತಪ್ಪ, ಕುಮಾರನಾಯ್ಕ್ ಇದ್ದರು. ಕನ್ನಡ ರಾಜ್ಯೋತ್ಸವ ಮತ್ತು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲು ಸಭೆ ಒಪ್ಪಿಗೆಯನ್ನು ಸೂಚಿಸಿತು. ಸರ್ಕಲ್ ಇನ್ಸಪೆಕ್ಟರ್ ನಿರಂಜನ್, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ, ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಪರಿಶಿಷ್ಟ ಪಂಗಡಗಳ ಅಧಿಕಾರಿ ರುದ್ರೇಶ್, ಜಯರಾಂ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.