ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ಹಲವು ದಲಿತ ಮುಖಂಡರು ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ನಡೆಸಲು ಮುಂದಾದರು. ತಪ್ಪು ಮಾಹಿತಿ ನೀಡಿದ ವಿಶ್ವ ಹಿಂದೂ ಪರಿಷತ್ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಜತೆ ದಲಿತ ಸಂಘಟನೆಗಳ ಮುಖಂಡರು ವಾಗ್ವಾದ ನಡೆಸಿದರು.
ಈ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ಮಧ್ಯಪ್ರವೇಶಿಸಿ, ಸಂಘರ್ಷಕ್ಕೆ ಕಾರಣವಾಗುವ ಆಚರಣೆ ಮಾಡಬಾರದು. ಪರಸ್ಪರ ಚರ್ಚೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಮನವೊಲಿಸಿದರು. ಬಳಿಕ ಮಹಾಮಂಡಳದ ಸದಸ್ಯರು ಹೋರಾಟ ಮೊಟಕುಗೊಳಿಸಿದರು.ಈ ವೇಳೆ ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಪೇಜಾವರ ಶ್ರೀಗಳು ಕಳೆದ ಅ. 12ರಂದು ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಅವರ ಮನೆಗೆ ಭೇಟಿ ನೀಡಿದ್ದರು. ಅವರ ಮನೆ ಭುವನೇಶ್ವರ ನಗರದಲ್ಲಿದ್ದು, ಇದು ದಲಿತರ ಕೇರಿ ಎಂದು ಎಲ್ಲಿಯೂ ನಮೂದಾಗಿಲ್ಲ. ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ವಾಸವಾಗಿದ್ದಾರೆ ಎಂದರು.
ಈ ಬಗ್ಗೆ ನಾವು ಕಾರ್ಯಕ್ರಮದ ಆಯೋಜಕ ಯಲ್ಲಪ್ಪ ಬಾಗಲಕೋಟಿ ಅವರನ್ನು ವಿಚಾರಿಸಿದಾಗ, ಸ್ವಾಮೀಜಿ ನಮ್ಮ ಮನೆಗೆ ಮತ್ತು ಇಲ್ಲಿನ ಭುವನೇಶ್ವರಿ ದೇವಸ್ಥಾನಕ್ಕೆ ಖಾಸಗಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ದಲಿತ ಕೇರಿ ಎಂದು ಹೇಳಿದ್ದು ತಪ್ಪಾಗಿದೆ ಎಂದು ಹೇಳಿದ್ದಾರೆ. ಶ್ರೀಗಳು ಖಾಸಗಿಯಾಗಿ ಅವರ ಮನೆಗೆ ಭೇಟಿ ನೀಡಿದ್ದರೆ ನಮ್ಮ ತಕರಾರಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ, ಧರ್ಮದವರು ಯಾರ ಮನೆಗೆ ಬೇಕಾದರೂ ಭೇಟಿ ನೀಡಬಹುದು. ಹೀಗಾಗಿ ಹೋರಾಟ ಕೈಬಿಡಲಾಗಿದೆ ಎಂದು ಉಳ್ಳಿಕಾಶಿ ತಿಳಿಸಿದರು.
ಹೋರಾಟಕ್ಕೆ ಕರೆ, ಹೇಳಿಕೆ ಬದಲಿಸಿದ ಯಲ್ಲಪ್ಪ:
ಪೇಜಾವರ ಶ್ರೀ ನಮ್ಮ ಮನೆಗೆ ಮತ್ತು ದೇವಸ್ಥಾನಕ್ಕೆ ಖಾಸಗಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ಮಾಧ್ಯಮಗಳಲ್ಲಿ ಭುವನೇಶ್ವರಿ ನಗರದ ಬದಲಾಗಿ ದಲಿತ ಕೇರಿ ಎಂದು ಪ್ರಕಟವಾಗಿದ್ದು, ಇದರಿಂದ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ. ದಲಿತ ಕೇರಿ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳದೆ ಭುವನೇಶ್ವರಿ ನಗರ ಎಂದು ಪರಿಗಣಿಸಿ ಮುಂದಿನ ಯಾವುದೇ ನಡೆಗೆ ಅವಕಾಶ ಕೊಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭುವನೇಶ್ವರಿ ಸೇವಾ ಸಂಘದ ಪ್ರಕಟಣೆ ಮೂಲಕ ಯಲ್ಲಪ್ಪ ಬಾಗಲಕೋಟಿ, ಮಂಜುನಾಥ ಸಣ್ಣಕ್ಕಿ ತಿಳಿಸಿದ್ಧಾರೆ.