ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪಂಚ ರಾಜ್ಯಗಳ ಚುನಾವಣೆಗಾಗಿ ಕಾಂಗ್ರೆಸ್ ₹1000 ಕೋಟಿ ಸಂಗ್ರಹಿಸುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಸಲ್ಲದು. ಈ ಕುರಿತು ಕೇಂದ್ರ ಸಚಿವರು ಸ್ಪಷ್ಟತೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಆಧಾರ ರಹಿತ ಆರೋಪ. ಆದಾಯ ತೆರಿಗೆ ಇಲಾಖೆ ಯಾರ ಕೈಯಲ್ಲಿದೆ ಎಂಬುದನ್ನು ಜೋಶಿ ಅರಿತು ಮಾತನಾಡಲಿ. ಅವರೊಬ್ಬ ಜವಾಬ್ದಾರಿಯುತ ನಾಯಕರು. ಅವರು ಯಾವ ಆಧಾರದ ಮೇಲೆ ಹೇಳಿದರು? ಎಂಬುದು ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟತೆ ನೀಡಲಿ ಎಂದರು.
ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದ ಹಾಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧಿಸಿದ ಇಲಾಖೆ ಯಾರ ಹಣ ಅಂತ ಮಾಹಿತಿ ಕೊಡಲಿ. ಅದು ಯಾರಿಗೆ ಸೇರಿದ್ದು ಮೊದಲು ಹೇಳಲಿ. ನಂತರ ಅದರ ಬಗ್ಗೆ ಚರ್ಚೆ ಆಗಲಿ. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ಸಲ್ಲದು ಎಂದರು.ಬಿಜೆಪಿಗೆ ನೈತಿಕತೆಯಿಲ್ಲ:
ಭ್ರಷ್ಟಾಚಾರದ ಕುರಿತು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್, ಅವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕತೆಯೂ ಇಲ್ಲ. ಕಳೆದ ಬಾರಿ ಬೊಮ್ಮಾಯಿ ಸರ್ಕಾರಕ್ಕೂ ಭ್ರಷ್ಟಾಚಾರದ ಆರೋಪ ಬಂದಿತು. 40%, ಪೇ ಸಿಎಂ ಎಲ್ಲ ಕಡೆಗಳಲ್ಲೂ ಭ್ರಷ್ಟಾಚಾರ ನಡಿತಾ ಇದೆ ಎಂದು ಜನರೇ ಮಾತನಾಡಲು ಆರಂಭಿಸಿದರು. ಅದಲ್ಲದೇ ಗುತ್ತಿಗೆದಾರರೂ ಆರೋಪಿಸಿದ್ದರು ಎಂದರು.ನಿಮಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗುತ್ತಿಲ್ಲ. ಬಿಜೆಪಿಯವರು ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಾರೆ. ನಿಮ್ಮ ಪಕ್ಷದ ನಾಯಕ ಯಾರು? ಎಂಬುದನ್ನು ಸ್ಪಷ್ಟಪಡಿಸಲಿ. ಸುಮ್ಮನೆ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ನಿಮ್ಮನ್ನು ಜನ ತಿರಸ್ಕರಿಸಿದ್ದಾರೆ:ಕೆಪಿಸಿಸಿ ಭ್ರಷ್ಟಾಚಾರದ ಕಮಿಟಿ ಎಂಬ ಹೇಳಿಕೆಗೆ ಉತ್ತರಿಸಿದ ಶೆಟ್ಟರ್, ಅದರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಎಲ್ಲಿದೆ? ನಿಮ್ಮ ಮೇಲೆಯೇ ಭ್ರಷ್ಟಾಚಾರ ಆಪಾದನೆ ಬಂದು ಜನ ತಿರಸ್ಕರಿಸಿ ನಿಮ್ಮನ್ನು ಮನೆಗೆ ಕಳಿಸಿದ್ದಾರೆ. ಈಗ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಎಲ್ಲಿದೆ ಎಂದರು.
ಗುತ್ತಿಗೆದಾರರ ಮನೆಯಲ್ಲೇ ಹಣ ಸಿಕ್ಕ ವಿಚಾರಕ್ಕೆ ಉತ್ತರಿಸಿ, ಸಂಘ ಬೇರೆ, ವ್ಯಕ್ತಿ ಬೇರೆ. ಸಂಘ ಹೋರಾಟ ಮಾಡಿದೆ. ವೈಯಕ್ತಿಕವಾಗಿ ಹಾಗೂ ಸಂಘ ಎರಡನ್ನೂ ಹೋಲಿಕೆ ಮಾಡಲು ಆಗಲ್ಲ. ದೊರೆತ ಹಣದ ಬಗ್ಗೆ ಸಂಪೂರ್ಣ ತನಿಖೆ ಆಗಲಿ. ಯಾರೇ ತಪ್ಪು ಮಾಡಿರಲಿ ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದರು.ಉಚಿತವಾಗಿ ವಿದ್ಯುತ್ ಕೊಡುವುದರಿಂದ ಲೋಡ್ ಶೆಡ್ಡಿಂಗ್ ಆಗುವುದಿಲ್ಲ. ಈ ವರ್ಷ ಸಮರ್ಪಕ ಮಳೆ ಇಲ್ಲದೇ ವಿದ್ಯುತ್ ಉತ್ಪಾದನೆಯಾಗಿಲ್ಲ. ಉಚಿತ ಯೋಜನೆಗಳನ್ನು ಕೊಟ್ಟರೆ ರಾಜ್ಯ ಬಜೆಟ್ ನಿಂದ ಅದಕ್ಕೆ ಬೇಕಾದ ಅನುದಾನ ಕೊಡುತ್ತಾರೆ. ಮಳೆಯ ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದರು.
ಕಲ್ಲಿದ್ದಲು ಕೊಟ್ಟಿದ್ದೀವಿ ಎನ್ನುವ ಪ್ರಹ್ಲಾದ ಜೋಶಿ ಹೇಳಿಕೆಗೆ ಉತ್ತರಿಸಿದ ಶೆಟ್ಟರ್, ಎಲ್ಲ ಸರ್ಕಾರ ಇದ್ದಾಗಲೂ ಹೆಸ್ಕಾಂ, ಬೆಸ್ಕಾಂ ನಷ್ಟದಲ್ಲಿವೆ. ಬಿಜೆಪಿ ಸರ್ಕಾರ ಇದ್ದಾಗ ಏನು ಲಾಭದಲ್ಲಿದ್ದವಾ?. ಯಾವಾಗಲೂ ಪರಿಸ್ಥಿತಿ ಹಾಗೇ ಇತ್ತು. ಈಗಲೂ ಹಾಗೆಯೇ ಇದೆ. ಸಾಲ ತಗೆದುಕೊಂಡೇ ಬೇರೆಡೆಯಿಂದ ಖರೀದಿಸಲಾಗುತ್ತದೆ ಎಂದರು.ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಕಾಂಗ್ರೆಸ್ ಬರುವ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಅವರನ್ನು ಸಂಪರ್ಕಿಸಿಲ್ಲ. ಅವರಾಗಿ ಏನಾದರೂ ಮಾತನಾಡಿದರೆ ಅವರೊಂದಿಗೆ ಮಾತನಾಡುವೆ. ಈ ವರೆಗೆ ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ಯಾಲೆಸ್ತೀನ್ ಬೆಂಬಲಿಸಿದ್ದ ಗಾಂಧೀಜಿ:ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ, ಕಾಂಗ್ರೆಸ್ ನಿಲುವಿನ ವಿಚಾರಕ್ಕೆ ಉತ್ತರಿಸಿ, ಇಸ್ರೇಲ್, ಪ್ಯಾಲಿಸ್ತಿನ್ ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ಪ್ರಕರಣ. ಇತಿಹಾಸ ನೋಡಿದರೆ ಮಹಾತ್ಮ ಗಾಂಧಿಯವರೇ ಪ್ಯಾಲೆಸ್ತೀನ್ ಗೆ ಬೆಂಬಲ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದ್ದರು. ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನೀತಿ ಬದಲಾವಣೆ ಆಗುತ್ತೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ ನಡೆಯುತ್ತಿದೆ. ಅಂತಿಮವಾಗಿ ಯಾವ ಉತ್ತರ ಬರಲಿದೆ ಎಂಬುದನ್ನು ಕಾದು ನೋಡೋಣ. ವಿದೇಶಿ ನೀತಿ ಬಗ್ಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಕುಳಿತು ಚರ್ಚೆ ಮಾಡಬೇಕು. ನಮ್ಮ ನಿಲುವು ಏನು ಎಂಬುದನ್ನು ನಿರ್ಧಾರ ಮಾಡಬೇಕು. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಲ್ವಾ ಎಂದು ಪ್ರಶ್ನಿಸಿದರು.