ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಎಪಿಎಂಸಿ ಯಾರ್ಡ್‌ಗೆ ಹೊಂದಿಕೊಂಡಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ರೈತ ಸಂಪರ್ಕ ಕೇಂದ್ರದ ಮುಂದೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಪಕ್ಷದ ಮುಖಂಡರು, ರೈತರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಬಿ.ಎಂ.ಸತೀಶ ಕೊಳೇನಹಳ್ಳಿ, ಕಳೆದ ಹಂಗಾಮಿನ ಭೀಕರ ಬರದಿಂದ ರೈತರು ತತ್ತರಿಸಿದ್ದಾರೆ. ಇದೀಗಮುಂಗಾರು ಪೂರ್ವದ ಮಳೆಯಿಂದಾಗಿ ಸಂಭ್ರಮದಿಂದ ರೈತರು ಮತ್ತೆ ಕೃಷಿಯತ್ತ ಮುಖ ಮಾಡಿದ್ದರು. ಭೂಮಿ ಉಳುಮೆ ಮಾಡಿ, ಹಸನು ಮಾಡಿಕೊಂಡಿದ್ದ ರೈತರು ಬಿತ್ತನೆ ಬೀಜಕ್ಕೆಂದು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಬಿತ್ತನೆ ಬೀಜಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರವು ಏರಿಸಿದೆ. ಮುಕ್ತ ಮಾರುಕಟ್ಟೆಯಲ್ಲೂ ಬಿತ್ತನೆ ಬೀಜಗಳ ಬೆಲೆ ಭಾರೀ ಹೆಚ್ಚಳವಾಗಿದೆ. ಇದೊಂದು ರೈತ ವಿರೋಧಿ ಕ್ರಮವಾಗಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಮತ್ತೊಂದು ಕೈಯಲ್ಲಿ ಸುಲಿಗೆಗೆ ಇಳಿದಿದೆ. ಬೆಲೆ ಏರಿಸುವ ಮೂಲಕ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ರೈತರ ಜೇಬಿಗೆ ಕೈ ಹಾಕಿ, ಪಿಕ್ ಪಾಕೆಟ್ ಮಾಡುತ್ತಿದೆ. ಇದು ನಾಚಿಕೆಗೇಡಿನ ಪರಮಾವಧಿ ಎಂದು ಅವರು ಕಿಡಿಕಾರಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತೊಂದು ಕಡೆ ಸದ್ದಿಲ್ಲದೇ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿದೆ ಎಂದು ಆರೋಪಿಸಿದರು.
ಸಹಾಯಧನ ಹೆಚ್ಚಿಸಿ, ಕಡಿಮೆ ದರಕ್ಕೆ ಬಿತ್ತನೆ ಬೀಜ ಪೂರೈಸಬೇಕು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮ ವಹಿಸಬೇಕು. ನಕಲಿ ಬೀಜಗಳ ಹಾವಳಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ, ಮೆಕ್ಕೆ ಬಿತ್ತುತ್ತಾರೆ. ಈಗಾಗಲೇ ಭತ್ತ, ಮೆಕ್ಕೆಜೋಳ ಬೀಜಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿಲ್ಲದೆ ಅಭಾವ ಕಂಡುಬರುತ್ತಿದೆ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು..ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆ ಮಾಡಲು ಕ್ರಮ ವಹಿಸಬೇಕು. .ಬರ ಪರಿಹಾರ ಸರಿಯಾಗಿ ವಿತರಣೆಯಾಗಿಲ್ಲ. ಈ ಬಗ್ಗೆ ಗಮನವಹಿಸಿ ಬರ ಪರಿಹಾರ ಸರಿಯಾದ ರೀತಿ ವಿತರಣೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.