ಬಜೆಟ್‌ನಲ್ಲಿ ಅನ್ಯಾಯ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Mar 9, 2025 1:48 AM

ಸಾರಾಂಶ

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಮಾತನಾಜಿ, ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ-ಧಾರವಾಡ ಸಂಪೂರ್ಣ ಕಡೆಗಣಿಸಿದ್ದಾರೆ. ಇದು ಖಂಡನೀಯ ಎಂದರು.

ಧಾರವಾಡ: ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ಕಡಪಾ ಮೈದಾನದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜ್ಯುಬಲಿ ವೃತ್ತದಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ-ಧಾರವಾಡ ಸಂಪೂರ್ಣ ಕಡೆಗಣಿಸಿದ್ದಾರೆ. ಇದು ಖಂಡನೀಯ ಎಂದರು.

ಬಜೆಟ್‌ನಲ್ಲಿ ಮೈಸೂರು ಹಾಗೂ ಕಲ್ಯಾಣ ಕರ್ನಾಟಕಕ್ಕೆ ಯಥೇಚ್ಛವಾಗಿ ಅನುದಾನ ಹಾಗೂ ಯೋಜನೆ ಘೋಷಿಸಿದ ಸಿದ್ದರಾಮಯ್ಯ, ರೈತರಿಗೆ, ಎಸ್ಸಿ-ಎಸ್ಟಿ ಜನರಿಗೆ, ಓಬಿಸಿ ಜನರಿಗೆ ಯಾವುದೇ ಕೊಡುಗೆ ನೀಡದ ಬಗ್ಗೆ ಕಿಡಿಕಾರಿದರು.

ಬಿಜೆಪಿ ಮುಖಂಡ ಮೋಹನ ರಾಮದುರ್ಗ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಮೂಲಕ ಮುಸ್ಲಿಂ ಓಲೈಸುವ ತುಷ್ಟೀಕರಣ ಮುಂದುವರೆಸಿದ್ದಾಗಿ ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶಿವು ಮೆಣಸಿನಕಾಯಿ, ಪವನ ಥಿಟೆ, ಎಸ್.ಎಸ್. ಅಂಗಡಿ, ಪ್ರಮೋದ ಕಾರಕೂನ್, ಅನಿತಾ ಚಳಗೇರಿ, ಸುನಿತಾ, ಬಸವರಾಜ ಗರಗ, ರಾಜು ಕಾಳೆ, ವಿರೇಶ ಹಿರೇಮಠ ಸೇರಿ ಅನೇಕರು ಇದ್ದರು.

ಕಮಿಷನರ್‌ ವೈಫಲ್ಯವಾ ಎಂಬುದನ್ನು ಅವರೇ ಹೇಳಲಿ: ಜೋಶಿ

ಹುಬ್ಬಳ್ಳಿ: ಅಂಗನವಾಡಿ ಪೌಷ್ಟಿಕ ಆಹಾರ ಪದಾರ್ಥ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಇದಕ್ಕೆ ಪೊಲೀಸ್‌ ಕಮಿಷನರ್‌ ಫೆಲ್ಯೂವರ್‌ (ವೈಫಲ್ಯ) ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರೇ ಸದನದಲ್ಲೇ ಹೇಳಿದ್ದಾರೆ. ಆದಕಾರಣ ಏಕೆ ಬಂಧಿಸಿಲ್ಲ? ಅವರಿಗೆ ಯಾರ ಒತ್ತಡವಿತ್ತು? ಅವರು ಫೆಲ್ಯೂವರ್‌ ಅಂಥ ಕಮಿಷನರ್‌ ಅವರೇ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿರುವುದರಿಂದ ಕಮಿಷನರ್ ಅವರು ಇದಕ್ಕೆ ಉತ್ತರ ನೀಡಬೇಕು. ಯಾರ ಒತ್ತಡದಿಂದ ಕಮಿಷನರ್ ಇನ್ನೂ ಮೊದಲ ಆರೋಪಿಯನ್ನು ಬಂಧಿಸಿಲ್ಲ. ಮುಖ್ಯ ಆರೋಪಿ ಒಂದು ಸಮುದಾಯಕ್ಕೆ ಸೇರಿದ್ದಾರೆ ಅಂಥ ಬಂಧನವಾಗಿಲ್ಲ. ಇದೇ ಬೇರೆ ಸಮುದಾಯದವರು ಆಗಿದ್ದರೆ ಇಷ್ಟೊತ್ತಿಗೆ ಬಂಧಿಸಿ ಬಿಡುತ್ತಿದ್ದರು. ಆರೋಪಿ ವಿಚಾರದಲ್ಲಿಯೂ ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿದೆ ಎಂದು ಹೇಳಿದರು.ಈ ಬಗ್ಗೆ ಕಮೀಷನರ್ ಮಾತನಾಡಬೇಕು. ಆರೋಪಿಗಳನ್ನು ಅರೆಸ್ಟ್ ಮಾಡಬೇಕು. ಇಲ್ಲವಾದರೆ ಹೆಸರು ಮಣ್ಣುಪಾಲು ಆಗುತ್ತದೆ ಎಂದು ಜೋಶಿ ಕಿಡಿಕಾರಿದರು. ಇನ್ನಾದರೂ ಪ್ರಮುಖ ಆರೋಪಿಯನ್ನು ಬಂಧಿಸಬೇಕು ಎಂದರು.

Share this article