ಕನ್ನಡಪ್ರಭ ವಾರ್ತೆ ಬಳ್ಳಾರಿ
ಧರ್ಮಾಧಾರಿತ ಮೀಸಲು ವಿರೋಧಿಸಿ ಹಾಗೂ ವಿಧಾನಸಭೆಯಿಂದ 18 ಶಾಸಕರನ್ನು ಅಮಾನತುಗೊಳಿಸಿರುವ ನಿಲುವು ಖಂಡಿಸಿ ಬಿಜೆಪಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಸರ್ಕಾರಿ ಕಾಮಗಾರಿಯ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲು ನೀಡುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಅವೈಜ್ಞಾನಿಕವಾಗಿದ್ದು, ಓಟ್ ಬ್ಯಾಂಕ್‌ಗಾಗಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡಿದೆ. ಇದನ್ನು ವಿರೋಧಿಸಿ ಪ್ರತಿಭಟನೆಗಿಳಿದ ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿರುವುದು ಕೂಡ ಜನವಿರೋಧಿ ನಿಲುವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಧರ್ಮಾಧಾರಿತ ಮೀಸಲನ್ನು ಅಸಂವಿಧಾನಿಕ ಎಂದು ಈಗಾಗಲೇ ನ್ಯಾಯಾಲಯಗಳು ತಿಳಿಸಿವೆ. ಈ ಹಿಂದೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಮುಸ್ಲಿಂ ಓಲೈಕೆ ನೀತಿಗಳಿಗೆ ಹಿಂದೇಟಾಗಿದೆ. ಇಷ್ಟಾಗಿಯೂ ರಾಜ್ಯದ ಕಾಂಗ್ರೆಸ್ ಸರ್ಕಾರ, ನಿರ್ದಿಷ್ಟ ಸಮುದಾಯಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಕಾಮಗಾರಿಯ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಜನಹಿತ ಮರೆತಿದೆ. ದುರ್ಬಲ ಸಮುದಾಯಗಳನ್ನು ಮೇಲೆತ್ತುವ ಯೋಜನೆಗಳನ್ನು ಜಾರಿಗೊಳಿಸುವ ಬದಲು, ಅದೇ ಸಮುದಾಯಕ್ಕೆ ಮೀಸಲಾದ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡು ತಾವು ದುರ್ಬಲಪರ ಸರ್ಕಾರ ಎಂದು ಹೇಳಿಕೊಳ್ಳುತ್ತಿದೆ. ಈ ಸರ್ಕಾರಕ್ಕೆ ನಿಜಕ್ಕೂ ಕಾಳಜಿಗಳಿದ್ದರೆ ಎಸ್‌ಸಿಪಿ-ಟಿಎಸ್ಪಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.
ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ಓಲೈಕೆಯ ರಾಜಕಾರಣ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಿದರು. ಬಳಿಕ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಟೈರ್‌ಗೆ ಬೆಂಕಿಹಚ್ಚಲು ಪೊಲೀಸರು ಬಿಡದಿದ್ದಾಗ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದರಲ್ಲದೆ, ಕಾಂಗ್ರೆಸ್ ಸರ್ಕಾರದ ವಿರುದ್ಧದ ನಮ್ಮ ಹೋರಾಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ಪೊಲೀಸರು ಟೈರ್ ಗಳಿಗೆ ಹಚ್ಚಿದ ಬೆಂಕಿಯನ್ನು ನಂದಿಸಿದರು. ಗಡಗಿಚನ್ನಪ್ಪ ವೃತ್ತದಿಂದ ಜಿಲ್ಲಾಡಳಿತ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪಕ್ಷದ ಮುಖಂಡರಾದ ಎಸ್.ಗುರುಲಿಂಗನಗೌಡ, ಎಚ್.ಹನುಮಂತಪ್ಪ, ಡಾ. ಮಹಿಪಾಲ್, ಕೆ.ಎಸ್. ದಿವಾಕರ್, ಶರಣು, ಸಾಧನಾ ಹಿರೇಮಠ, ಪುಷ್ಪಲತಾ ಚಂದ್ರಶೇಖರ್, ಸುಗುಣಾ, ಶ್ರೀಧರಗಡ್ಡೆ ಬಸವಲಿಂಗನಗೌಡ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷ, ಸದಸ್ಯರುಗಳು ಪ್ರತಿಭಟನೆಯಲ್ಲಿದ್ದರು.