ಹೊಸಪೇಟೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿ ದಿವಾಳಿ ಅಂಚಿನಲ್ಲಿರುವ ಜನವಿರೋಧಿ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಪರಿಣಾಮ ರಾಜ್ಯದ ಹಣಕಾಸಿನ ಮೇಲೆ ಒತ್ತಡ ಉಂಟಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣದ ಪಾವತಿ ವಿಳಂಬವಾಗುತ್ತಿದೆ. ಮತ್ತೊಂದೆಡೆ ಸರ್ಕಾರ ಹೊಸ ಹೊಸ ಯೋಜನೆ ಘೋಷಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಬರ ಪರಿಸ್ಥಿತಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಪ್ರಮುಖರು ಬರ ವೀಕ್ಷಣೆ ನಡೆಸಿದರೂ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ದೊರೆತಿಲ್ಲ. ಸರ್ಕಾರಿ ನೌಕರರಿಗೆ ವೇತನ ಪಾವತಿ ಕುರಿತಂತೆಯೂ ಸರ್ಕಾರದ ಆರ್ಥಿಕ ಸ್ಥಿತಿ ಪ್ರಶ್ನಿಸಿದ ಅವರು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಮೌನ ವಹಿಸಿದೆ ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ ಮಾತನಾಡಿ, ರಾಜ್ಯದ ಆದಾಯ ಹೆಚ್ಚಿಸುವ ಉದ್ದೇಶದಿಂದ ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ. ಹಾಲು ಹಾಗೂ ಸಾರಿಗೆ ವ್ಯವಸ್ಥೆಯ ಮೇಲಿನ ತೆರಿಗೆ ಹೆಚ್ಚಳದಂತಹ ಕ್ರಮಗಳಿಂದ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಹೇಳಿದರು.