ಡಿವೈಡರ್‌ ಅಭಿವೃದ್ಧಿ ಕಾಮಗಾರಿ ಸ್ಥಗಿತ: ಆಕ್ರೋಶ

KannadaprabhaNewsNetwork |  
Published : Sep 26, 2026, 01:30 AM IST
25ಎಚ್‌ಆರ್‌ ಪಿ 1 ಹರಪನಹಳ್ಳಿ ನಗರದ ಮುಖ್ಯ ರಸ್ತೆಯಲ್ಲಿ ಕಳೆದ ಎಳು ತಿಂಗಳಿನಿಂದ ಡಿವೈಡರ್ ಕಾಮಗಾರಿ ಸ್ಥಗಿತಗೊಂಡಿರುವುದು 25ಎಚ್‌ ಆರ್‌ ಪಿ 2 - ರೇಣುಕಾ ಎಸ್.ದೇಸಾಯಿ, ಪೌರಾಯುಕ್ತರು, ನಗರಸಭೆ, 25ಎಚ್‌ ಆರ್‌ ಪಿ 3 - ಕೆ.ಶ್ರೀನಿವಾಸರಾವ್, ಸುಖ ಶಯನ ಲಾಡ್ಜ್‌ ಮಾಲಿಕ, ಹರಪನಹಳ್ಳಿ  | Kannada Prabha

ಸಾರಾಂಶ

ಈ ಕಾಮಗಾರಿ ಸ್ಥಗಿತಗೊಂಡು ಸುಮಾರು ಏಳು ತಿಂಗಳು ಕಳೆದಿವೆ, ಈ ಸಂಬಂಧ ನಗರಸಭೆಯವರು ಮೌಖಿಕವಾಗಿ ಸಾಕಷ್ಚು ಬಾರಿ ಹೇಳಿ ನಂತರ ಎರಡು ನೋಟಿಸ್‌ ಕೊಟ್ಟರೂ ಈ ವರೆಗೂ ಗುತ್ತಿಗೆದಾರರು ಇಲ್ಲಿಗೆ ಬಂದಿಲ್ಲ,

ಬಿ.ರಾಮಪ್ರಸಾದ್‌ ಗಾಂಧಿ ಹರಪನಹಳ್ಳಿ

ಹರಪನಹಳ್ಳಿ ನಗರದ ಹರಿಹರ ವೃತ್ತದಿಂದ ಪ್ರವಾಸಿ ಮಂದಿರ ವೃತ್ತದವರೆಗೆ ವಿಭಜಕದಲ್ಲಿ ಹೊಸದಾಗಿ ಕಂಬ ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿ ಕಳೆದ 7 ತಿಂಗಳಿನಿಂದ ಸ್ಥಗಿತಗೊಂಡಿದ್ದು, ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆಯಿಂದ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ ₹88.30 ಲಕ್ಷ ಅನುದಾನದಲ್ಲಿ ಸಿಂಧನೂರಿನ ಬಸವೇಶ್ವರ ಎಲೆಕ್ಟ್ರಿಕ್‌ ನ ಮಲ್ಲಿಕಾರ್ಜುನ ಎಂಬುವವರಿಗೆ ಟೆಂಡರ್‌ ಆಗಿದ್ದು, ಅವರು ಉಪಗುತ್ತಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ನಗರಸಭೆಯವರು ಜೂ.27-2025 ರಂದು ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ನೀಡಿದ್ದಾರೆ. ನಂತರ ಕಾಮಗಾರಿ ಆರಂಭಿಸಿದ ಅವರು ಹರಿಹರ ವೃತ್ತದಿಂದ ನಗರಸಭೆವರೆಗೂ ಮಾತ್ರ ರಸ್ತೆ ವಿಭಜಕ ನಿರ್ಮಿಸಿ ಕಂಬ ನೆಟ್ಟು ದೀಪ ಅಳವಡಿಸಿದ್ದಾರೆ. ಉಳಿದ ಡಾ. ಬಿ.ಆರ್. ಅಂಬೇಡ್ಕರ (ಐಬಿ) ವೃತ್ತದವರೆಗೆ ಕೇವಲ ವಿಭಜಕ ನಿರ್ಮಿಸಿ ಕೈ ಬಿಟ್ಚಿದ್ದಾರೆ.

ಈ ಕಾಮಗಾರಿ ಸ್ಥಗಿತಗೊಂಡು ಸುಮಾರು ಏಳು ತಿಂಗಳು ಕಳೆದಿವೆ, ಈ ಸಂಬಂಧ ನಗರಸಭೆಯವರು ಮೌಖಿಕವಾಗಿ ಸಾಕಷ್ಚು ಬಾರಿ ಹೇಳಿ ನಂತರ ಎರಡು ನೋಟಿಸ್‌ ಕೊಟ್ಟರೂ ಈ ವರೆಗೂ ಗುತ್ತಿಗೆದಾರರು ಇಲ್ಲಿಗೆ ಬಂದಿಲ್ಲ, ಕಾಮಗಾರಿ ಆರಂಭಿಸಿಲ್ಲ. ಇದರಿಂದ ಜನರಿಗೆ ರಾತ್ರಿ ಹೊತ್ತು ಸರಿಯಾದ ಬೀದಿ ದೀಪವಿಲ್ಲದೆ ಓಡಾಡುವುದು ಬಹಳ ಸಮಸ್ಯೆ ಆಗುತ್ತಲಿದೆ. ಈಗ ಮಾಡಿರುವ ಸ್ವಲ್ಪ ಕಾಮಗಾರಿ ಸಹ ಸರಿಯಾಗಿ ನಿರ್ವಹಣೆಯಾಗಿಲ್ಲ, ಗುಣಮಟ್ಟದಿಂದ ಕೂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ₹39 ಲಕ್ಷ ಹಣ ಪಾವತಿಯಾಗಿದೆ ಎಂಬ ಮಾಹಿತಿ ನಗರಸಭೆಯಲ್ಲಿ ದೊರಕುತ್ತದೆ.

ನಗರಸಭೆಯಿಂದ ಐಬಿ ವೃತ್ತದವರೆಗೆ ನಿರ್ಮಿಸಿರುವ ಡಿವೈಡರ್‌ ನಲ್ಲಿ ಮಣ್ಣು ಸಹ ತುಂಬಿಲ್ಲ, ಇದರಿಂದ ಮೊನ್ನೆ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ರಾತ್ರಿ ಹೊತ್ತು ಜನರಿಗೆ ಸಮಸ್ಯೆಯಾಯಿತು. ಪೊಲೀಸ್‌ ಅಧಿಕಾರಿಗಳು ಡಿವೈಡರ್ ಮಧ್ಯೆ ಮಣ್ಣು ತುಂಬಿಸಿ ಎಂದು ನಗರಸಭೆಗೆ ಹೇಳಿದಾಗ ಪೌರಾಯುಕ್ತರು ಸಂಬಂಧಿಸಿದ ಗುತ್ತಿಗೆದಾರರಿಗೆ ಈ ಬಗ್ಗೆ ಸೂಚಿಸಿದರೂ ಗುತ್ತಿಗೆದಾರರು ಕ್ಯಾರೆ ಎನ್ನದೆ ನಿರ್ಲಕ್ಷ್ಯ ವಹಿಸಿದರು.

ಇನ್ನೂ ಯಾವಾಗ ಅಪೂರ್ಣ ಕಾಮಗಾರಿ ಪೂರ್ಣ ಮಾಡುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ, ಉಪಗುತ್ತಿಗೆದಾರರಾಗಲಿ ಅಥವಾ ಮೂಲ ಗುತ್ತಿಗೆದಾರರಾಗಲಿ ಈ ಕಡೆ ತಲೆ ಹಾಕಿಲ್ಲ. ಆದ್ದರಿಂದ ಇಲ್ಲಿಯ ನಾಗರೀಕರು, ಸಂಘ ಸಂಸ್ಥೆಯ ಕಾರ್ಯಕರ್ತರು ಕೂಡಲೇ ಸ್ಥಗಿತಗೊಂಡ ಡಿವೈಡರ್ ನಲ್ಲಿ ಮಣ್ಣು ತುಂಬಿ ಕಂಬ ನೆಟ್ಟು ಬೀದಿ ದೀಪ ಅಳವಡಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಸ್ತೆ ವಿಭಜಕದ ಅಪೂರ್ಣ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಬೇಕು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಕೊಡಬೇಕು ಎಂದು ಮೌಖಿಕವಾಗಿ ಸಾಕಷ್ಟು ಬಾರಿ ಹಾಗೂ ನಂತರ ಎರಡು ನೋಟೀಸ್ ಕೊಟ್ಟರೂ ಗುತ್ತಿಗೆದಾರರು ಮಾತು ಕೇಳುತ್ತಿಲ್ಲ, ಆದ್ದರಿಂದ ಮೇಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ನಗರಸಭೆ ಪೌರಾಯುಕ್ತ ರೇಣುಕಾ ದೇಸಾಯಿ ತಿಳಿಸಿದ್ದಾರೆ.ಡಿವೈಡರ್‌ ಕಾಮಗಾರಿ ಸ್ಥಗಿತಗೊಂಡು ಬಹಳ ದಿನಗಳಾಗಿವೆ, ಇದರಿಂದ ರಾತ್ರಿ ಹೊತ್ತು ಜನರಿಗೆ ಬಹಳಷ್ಟು ತೊಂದರೆಯಾಗುತ್ತದೆ,ಡಿವೈಡರ್‌ ಮಧ್ಯದಲ್ಲಿ ಮಣ್ಣು ತುಂಬಿ ಕಂಬ ನೆಟ್ಟು, ದೀಪ ಅಳವಡಿಸಲು ಗುತ್ತಿಗೆದಾರರಿಗೆ ನಗರಸಭೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟು ಬೇಗ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.

ಹರಪನಹಳ್ಳಿ ಸುಖ ಶಯನ ಲಾಡ್ಜ್‌ ಮಾಲಿಕ ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಡಿತ್ ಮತ್ತು ಮುಖರ್ಜಿ ಕನಸು ನನಸಾಗಿದೆ : ಕುತ್ಯಾರು ನವೀನ್ ಶೆಟ್ಟಿ
ಮಹಿಳಾ ಕುಸ್ತಿಯಲ್ಲಿ ಮೂರು ಪದಕ