ಸರ್ಕಾರದ ಖಜಾನೆ ಸಂಪೂರ್ಣ ಖಾಲಿ । ಗುಂಡಿ ಮುಚ್ಚಲು ವಿಫಲವಾದ ರಾಜ್ಯ ಸರ್ಕಾರ: ಆರೋಪಕನ್ನಡಪ್ರಭ ವಾರ್ತೆ ರಾಮನಗರ
ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿ ಗುಂಡಿ ಮುಚ್ಚದ ಪರಿಸ್ಥಿತಿಗೆ ಬಂದು ನಿಂತಿದೆ. ಬೆಂಗಳೂರು ಈಗ ಗುಂಡಿಯೂರು ಆಗಿದೆ. ಸಾಕಷ್ಟು ಜನ ನಿತ್ಯ ರಸ್ತೆ ಗುಂಡಿಗೆ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಟೀಕಿಸಿದರು.ನಿಮ್ಮ ಬಳಿ ಹಣ ಇಲ್ಲ ಅಂದ್ರೆ, ಓಪನ್ ಆಗಿ ಡಿಕ್ಲೇರ್ ಮಾಡಿ. ಮುಚ್ಚಿರುವ ಗುಂಡಿ ಲೆಕ್ಕ ಹೇಳುತ್ತಿದ್ದೀರಲ್ಲ, ತೆರೆದಿರುವ ಗುಂಡಿಗಳ ಬಗ್ಗೆಯೂ ಹೇಳಿ. ಸಾವಿರ ಗುಂಡಿ ಮುಚ್ಚಿದರೆ ಮರುದಿನ ಅದೇ ಸಾವಿರ ಗುಂಡಿ ಓಪನ್ ಆಗುತ್ತದೆ. ಇದು ಕಳ್ಳ ಪೊಲೀಸ್ ಆಟದ ರೀತಿ ಇದೆ ಎಂದು ದೂರಿದರು.
ಸರಿಯಾಗಿ ಆಡಳಿತ ನೀಡುವುದನ್ನು ಬಿಟ್ಟು, ಪ್ರತಿಪಕ್ಷಗಳನ್ನು ಟೀಕೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಗುಂಡಿ ಮುಚ್ಚಿಲ್ಲ ಅಂತೀರಲ್ಲ, ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ, ಶಾಶ್ವತ ಅಲ್ಲ. ಇಡೀ ಕಾಂಗ್ರೆಸ್ ಸರ್ಕಾರ ಗುಂಡಿಗಳಲ್ಲಿ ಅಡಗಿದೆ. ರಸ್ತೆ ಗುಂಡಿಗಳು ಮರಣ ಕೂಪ ಆಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕಾಗಿದೆ ಎಂದು ಒತ್ತಾಯಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಗ್ಯಾರಂಟಿ ಯೋಜನೆ ಜಪ ಮಾಡುತ್ತಿರುವ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಗುಂಡಿಗಳನ್ನು ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ. ಇದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ರಸ್ತೆಗುಂಡಿಗಳಿಂದ ಜನರು ಹೈರಾಣಾಗಿದ್ದಾರೆ. ಪ್ರತಿದಿನ ವಾಹನ ಸವಾರರು ಪರದಾಡೋ ಪರಿಸ್ಥಿತಿ ಉಂಟಾಗಿದೆ. ಹತ್ತಾರು ಜೀವಗಳು ರಸ್ತೆ ಗುಂಡಿಗಳಿಂದ ಬಲಿಯಾಗಿವೆ ಎಂದು ಟೀಕಿಸಿದರು.ಐಟಿ ಕಂಪನಿಗಳು ಬೆಂಗಳೂರು ತೊರೆದು ಬೇರೆ ರಾಜ್ಯಕ್ಕೆ ಹೋಗುತ್ತಿವೆ. ಇಷ್ಟಾದರೂ ಗುಂಡಿ ಮುಚ್ಚದೇ ಉಪ ಮುಖ್ಯಮಂತ್ರಿಗಳು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಬೆಂಗಳೂರಿನ ಎಲ್ಲಾ ಗುಂಡಿಗಳನ್ನ ಮುಚ್ಚಿ ಮರ್ಯಾದೆ ಉಳಿಸಿಕೊಳ್ಳಿ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ಬಿಜೆಪಿ ಮುಖಂಡರಾದ ಪದ್ಮನಾಭ್, ಜಗದೀಶ್, ರುದ್ರದೇವರು, ಚಂದ್ರಶೇಖರ್ ರೆಡ್ಡಿ, ಚಂದನ್ ಮೋರೆ, ಕಾಳಯ್ಯ, ಚನ್ನಪ್ಪ, ಕೆಂಪಣ್ಣ, ಜೆಡಿಎಸ್ ಮುಖಂಡ ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.-----
24ಕೆಆರ್ ಎಂಎನ್ 4.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.