ವೈದ್ಯರ ವರ್ಗಾವಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jun 18, 2025, 11:48 PM IST
ಫೋಟೋ ಜೂ.೧೮ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಜಿಲ್ಲೆಯಲ್ಲೇ ಯಲ್ಲಾಪುರದ ಆಸ್ಪತ್ರೆ ಮಾದರಿಯಾಗಿದೆ. ಇದನ್ನು ಹಾಳುಮಾಡಲು ಹುನ್ನಾರ ನಡೆದಿದೆ.

ಯಲ್ಲಾಪುರ: ಜಿಲ್ಲೆಯಲ್ಲೇ ಯಲ್ಲಾಪುರದ ಆಸ್ಪತ್ರೆ ಮಾದರಿಯಾಗಿದೆ. ಇದನ್ನು ಹಾಳುಮಾಡಲು ಹುನ್ನಾರ ನಡೆದಿದೆ. ಸಾಮಾನ್ಯರಿಂದ ಹಿಡಿದು ತೀರಾ ಬಡವರೂ ಈ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಪಡೆದು ವೈದ್ಯರ ಬಗೆಗೆ ಜನಾಭಿಪ್ರಾಯ ಮೂಡಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ವೈದ್ಯರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಸರ್ಕಾರವನ್ನು ಬಿಜೆಪಿ ಜಿಲ್ಲಾ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು.ಅವರು ಬುಧವಾರ ಪಟ್ಟಣದ ತಾಲೂಕು ಆಸ್ಪತ್ರೆಯಿಂದ ಬಿಜೆಪಿ ಸಂಘಟಿಸಿದ ತಜ್ಞ ವೈದ್ಯರಾದ ಡಾ.ದೀಪಕ ಭಟ್ಟ, ಡಾ.ಸೌಮ್ಯಾ ಕೆ.ವಿ. ವರ್ಗಾವಣೆ ಕುರಿತು ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿದರು.

ಆಸ್ಪತ್ರೆಯಲ್ಲಿ ತಿಂಗಳಿಗೆ ೮೦-೧೦೦ ಹೆರಿಗೆಯಾಗುತ್ತವೆ. ವರ್ಷಕ್ಕೆ ಸಾವಿರಾರು. ಅದು ಸಿಜೇರಿಯನ್ ಮಾಡದೇ ಸಹಜ ಹೆರಿಗೆ. ಇಂದು ಸಿಜೇರಿಯನ್ ಮಾಡುವುದೇ ಒಂದು ವ್ಯವಹಾರವಾದ ಕಾಲಘಟ್ಟದಲ್ಲಿ ಇಂತಹ ಅಪರೂಪದ ವೈದ್ಯರು ನಮ್ಮ ಆಸ್ಪತ್ರೆಯಿಂದ ವರ್ಗವಾದರೆ ಇಲ್ಲಿನ ಬಡವರು ತೀವ್ರ ಸಂಕಷ್ಟಕ್ಕೆ ತಲುಪಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ನಾವು ಸರ್ಕಾರದ ಮೇಲೆ ಜಿಲ್ಲಾಡಳಿತ, ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ನೆಲೆಯಲ್ಲಿ ಈ ವರ್ಗಾವಣೆ ರದ್ದಾಗುವುದಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದರು.

ಚಂದ್ರಕಲಾ ಭಟ್ಟ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವ ವೈದ್ಯರನ್ನು ನಂಬಬೇಕೆಂಬುದೇ ಅರ್ಥವಾಗುತ್ತಿಲ್ಲ. ಜನಾನುರಾಗಿಯಾದ ವೈದ್ಯರನ್ನು ವರ್ಗಾವಣೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಳೆದ ೧೫ ವರ್ಷಗಳ ಹಿಂದಿನ ಈ ಆಸ್ಪತ್ರೆಯ ಸ್ಥಿತಿ ನೋಡಿದರೆ ನಮಗೆ ಅರ್ಥವಾಗುತ್ತದೆ. ೧೫ ವರ್ಷದಿಂದೀಚೆ ಈ ಆಸ್ಪತ್ರೆ ಅತ್ಯಂತ ಆಧುನಿಕವಾಗಿ ಎಲ್ಲ ರೀತಿಯ ಸೌಲಭ್ಯ ಪಡೆದು ಜನಪರ ವೈದ್ಯರು ಇದ್ದು, ಜಿಲ್ಲೆಯಲ್ಲೇ ಮಾದರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಆಸ್ಪತ್ರೆಯ ವೈದ್ಯರನ್ನು ವರ್ಗಾವಣೆ ಮಾಡಿರುವುದು ಖಂಡನೀಯ ಎಂದರು.

ಮಂಡಳ ಅಧ್ಯಕ್ಷ ಪ್ರಸಾದ್ ಹೆಗಡೆ ಮಾತನಾಡಿ, ತಾಲೂಕು ಆಸ್ಪತ್ರೆ ವೈದ್ಯರ ವರ್ಗಾವಣೆ ವಿಷಯದಲ್ಲಿ ಸ್ಥಳೀಯ ಶಾಸಕರು ಜಾಣ ಕುರುಡು ಪ್ರದರ್ಶನ ಮಾಡಬಾರದು. ಶಾಸಕರೇ ಹೊಣೆ ಹೊತ್ತು ವರ್ಗಾವಣೆಗೆ ತಡೆ ಹಾಕಬೇಕೆಂದು ಆಗ್ರಹ ಮಾಡಿದರು.

ಪ್ರಮುಖರಾದ ಉಮೇಶ ಭಾಗ್ವತ, ರಾಮು ನಾಯ್ಕ, ಶ್ಯಾಮಿಲಿ ಪಾಟಣಕರ, ದೋಂಡು ಪಾಟೀಲ, ರೇಖಾ ಹೆಗಡೆ, ನಟರಾಜ ಗೌಡರ್, ರಾಘವೇಂದ್ರ ಭಟ್ಟ ಹಾಸಣಗಿ, ವೆಂಕಟ್ರಮಣ ಬೆಳ್ಳಿ, ವಿಠ್ಠು ಪಾಂಡು ಮಿಶ್ರೆ ಸೇರಿದಂತೆ ಹಲವರು ವರ್ಗಾವಣೆಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗೋಪಾಲಕೃಷ್ಣ ಗಾಂವ್ಕರ, ಸುಬ್ಬಣ್ಣ ಬೋಳ್ಮನೆ, ಶ್ರುತಿ ಹೆಗಡೆ, ಶಿವಲಿಂಗಯ್ಯ ಅಲ್ಲಯ್ಯನಮಠ, ಗಣಪತಿ ಬೋಳಗುಡ್ಡೆ, ಗಣಪತಿ ಮಾನಿಗದ್ದೆ, ನಾಗರಾಜ ಕವಡಿಕೆರೆ, ಜಿ.ಆರ್.ಭಾಗ್ವತ, ಬೊಜ್ಜು ಪಿಂಗಳೆ, ಗಾಂಧಿ ಸೋಮಾಪುರಕರ, ರಜತ ಬದ್ದಿ, ರವಿ ದೇವಡಿಗ, ವಿನೋದ ತಳೇಕರ, ಸುನಂದಾ ಮರಾಠಿ, ವಿನೀಶ ಭಟ್ಟ, ವಿಠ್ಠು ಶೆಳಕೆ, ಹೀರು ಶಿಂಧೆ, ಪ್ರಭು ಚುಂಚಖಂಡಿ, ಅರ್ಜುನ ಬೆಂಗೇರಿ, ಮಹೇಶ ದೇಸಾಯಿ ಇದ್ದರು.

ಮಂಡಳ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡ ಸ್ವಾಗತಿಸಿದರು. ರವಿ ಕೈಟ್ಕರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್