ಶಿರಸಿ ನಗರಸಭೆಯಿಂದ ಅವೈಜ್ಞಾನಿಕ ಕಾಮಗಾರಿ, ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : May 23, 2026, 02:00 AM IST
ಶಿರಸಿ ನಗರಸಭೆ ವತಿಯಿಂದ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆಯಿಂದ ಯಾವುದೇ ಸಿದ್ಧತೆ ನಡೆಸದಿರುವುದು ಮತ್ತು ನಗರದಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರಸಭೆ ವಿರುದ್ಧ ಪ್ರತಿಭಟನೆ ಮಾಡಿದರು.

ಶಿರಸಿ: ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆಯಿಂದ ಯಾವುದೇ ಸಿದ್ಧತೆ ನಡೆಸದಿರುವುದು ಮತ್ತು ನಗರದಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿರುವುದನ್ನು ಖಂಡಿಸಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶುಕ್ರವಾರ ನಗರಸಭೆ ವಿರುದ್ಧ ಪ್ರತಿಭಟನೆ ಮಾಡಿದರು.

ಬಳಿಕ ಮಾತನಾಡಿದ ಆನಂದ್ ಸಾಲೇರ್ ಅವರು, ನಗರದಲ್ಲಿ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿವೆ. ಕೆಲವು ವಾರ್ಡ್‌ಗಳಲ್ಲಿ ಕೆಲಸವಾದರೆ ಇನ್ನು ಕೆಲವೊಂದು ವಾರ್ಡ್‌ಗಳಲ್ಲಿ ಕೆಲಸ ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ ಎಂದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಂದಿ ಕಾಟ ಮತ್ತು ಬೀದಿನಾಯಿಗಳ ಕಾಟ ತಡೆಯಲು ನಗರಸಭೆ ವಿಫಲವಾಗಿದೆ. ಹಂದಿ, ನಾಯಿ ಕಾಟದಿಂದ ಅನೇಕರು ಆಸ್ಪತ್ರೆ ಸೇರುತ್ತಿದ್ದಾರೆ, ಇದಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದರು.

ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಎಲ್ಲೆಲ್ಲಿ ಅರ್ಧಂಬರ್ಧ ಕಾಮಗಾರಿ ನಡೆದಿದೆಯೋ ಅವುಗಳನ್ನೆಲ್ಲ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಮಳೆಗಾಲ ಹತ್ತಿರ ಬಂದರೂ ಸಿದ್ಧತೆ ಶಾಸಕರು ಇದುವರೆಗೂ ನಗರಸಭೆಯಲ್ಲಿ ಅಧಿಕಾರಿಗಳ ಸಭೆ ಕರೆದಿಲ್ಲ. ಪಂಡಿತ್ ಸಾರ್ವಜನಿಕ ಆಸ್ಪತ್ರೆಯಿಂದ ಅವೇ ಮರಿಯಾ ಶಾಲೆಯ ಮುಂಭಾಗ ರಸ್ತೆ ಅಗಲೀಕರಣ ಮಾಡದೇ ಲೋಕೋಪಯೋಗಿ ಇಲಾಖೆ ಸಿಡಿ ನಿರ್ಮಿಸುತ್ತಿರುವುದು ಸರಿಯಲ್ಲ. ಈ ಇಕ್ಕಟ್ಟಾದ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಯಾರು ಹೊಣೆ? ನಾಲ್ಕೈದು ತಿಂಗಳ ಹಿಂದೆಯೇ ಶಾಸಕರು ನಗರೋತ್ಥಾನ ಕಾಮಗಾರಿ ಸಂಪೂರ್ಣವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರೂ ಇದುವರೆಗೂ ಪೂರ್ಣಗೊಳಿಸಿಲ್ಲ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ಸಾಗರ್ ಮಾತನಾಡಿ, 15 ದಿನಗಳಲ್ಲಿ ನಗರದ 31 ವಾರ್ಡ್‌ಗಳ ರಸ್ತೆಗೆ ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು. ಇಲ್ಲವಾದಲ್ಲಿ ನಗರಸಭೆ ಗೇಟ್ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಆನಂತರ ಬಿಜೆಪಿ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್ ಅವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ನಾಗರಾಜ್ ನಾಯ್ಕ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಕುಮಾರ್ ಬೋರ್ಕರ್, ರಾಘು ಶೆಟ್ಟಿ, ವನಿತಾ ಶೆಟ್ಟಿ, ರಮಾಕಾಂತ ಭಟ್ ಪಾಲ್ಗೊಂಡಿದ್ದರು.

ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ: ನಗರದಲ್ಲಿ ಈಗಾಗಲೇ ಶೇ. 80 ಕಾಮಗಾರಿ ಮುಗಿದಿದೆ. ಇನ್ನುಳಿದ ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ. ಮಳೆ ಬರುವುದರೊಳಗಾಗಿ ಎಲ್ಲ ಕಾಮಗಾರಿಗಳನ್ನು ಮುಗಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಶಿರಸಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮೊನ್ನೆ ಮಳೆ ಬಂದಿರುವ ಕಾರಣ ಕೆಂಗ್ರೆ ಹೊಳೆಯಲ್ಲಿ ನೀರಿದೆ. ಅದನ್ನು ಹೊರತುಪಡಿಸಿ ನಗರಸಭೆಯಿಂದ 23 ಕೊಳವೆಬಾವಿ ತೋಡಿಸಲಾಗಿದೆ. ಸಾರ್ವಜನಿಕರಿಗೆ ನೀರಿನ ತೊಂದರೆ ಆಗುವುದಿಲ್ಲ ಎಂದು ಶಿರಸಿ ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣಕೋಣ ಗ್ರಿಡ್‌ನಿಂದಲೇ ಮರಳಿ ವಿದ್ಯುತ್ ಸಂಪರ್ಕ: ಗ್ರಾಮಸ್ಥರ ಹರ್ಷ
ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ: ಆಂಜನೇಯ