ರಾಮನಗರ: ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಸಾರಿಗೆ ಬಸ್ಸುಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಚೇಲಾಗಳಿಂದಲೇ ತನಗೆ ತೊಂದರೆಯಾಗಿದೆ ಎಂದು ಹೇಳಿ ಸಚಿನ್ ಪಾಂಚಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಬೇಕಿದ್ದರೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಜೊತೆಗೆ ಸಚಿವರು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಸರಣಿ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿಂದೆ ಈಶ್ವರಪ್ಪನವರ ರಾಜೀನಾಮೆ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಪಾದಿತ ಸ್ಥಾನದಲ್ಲಿರುವ ಸಚಿವರ ರಾಜೀನಾಮೆ ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.ವಾಲ್ಮೀಕಿ ನಿಗಮದ ಚಂದ್ರಶೇಖರಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ್ ದದ್ದಲ್, ಬೆಳಗಾವಿಯಲ್ಲಿ ಎಸ್ ಡಿಎ ರುದ್ರಣ್ಣ ಎಡವಣ್ಣನವರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಪಡೆಯಲಿಲ್ಲ. ಬೀದರ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ನಾಯಕ್ ಸಾವಿನ ಪ್ರಕರಣದಲ್ಲಿ ಯಾದಗಿರಿ ಶಾಸಕ ಚನ್ನರೆಡ್ಡಿಯನ್ನು ಏಕೆ ಬಂಧಿಸಲಿಲ್ಲ ಎಂದು ಕೇಳಿದರು.
ಅಪರಾಧಿ ಸ್ಥಾನದಲ್ಲಿ ನಿಂತಿರುವ ಪ್ರಿಯಾಂಕ್ ಖರ್ಗೆ ಇಂತದ್ದೇ ತನಿಖೆ ನಡೆಸಬೇಕೆಂದು ತೀರ್ಮಾನ ಮಾಡಲು ಯಾವ ಅಧಿಕಾರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಕೆಲ ನಾಯಕರು ಬಿಜೆಪಿ ನಾಯಕರನ್ನು ನಿಂದನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅಲ್ಲದೆ, ಸುಪಾರಿ ನೀಡಿ ವಿಪಕ್ಷ ನಾಯಕರನ್ನು ಹತ್ಯೆಯ ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ಹೇಗೆಲ್ಲ ನಡೆಸಿಕೊಂಡರು ಎಂಬುದನ್ನು ನಾಡಿನ ಜನರು ನೋಡಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ರುದ್ರದೇವರು, ಶಿವಾನಂದ, ಎಸ್.ಆರ್.ನಾಗರಾಜು, ಎಲೆಕೆರೆ ರವೀಶ್, ಚಂದ್ರಶೇಖರ್ ರೆಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಲತಾ ಮತ್ತಿತರರು ಭಾಗವಹಿಸಿದ್ದರು.
1.ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಾರಿಗೆ ಬಸ್ಸಿಗೆ ಪೋಸ್ಟರ್ ಅಂಟಿಸುತ್ತಿರುವುದು.