ನಾಗೇಂದ್ರ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Aug 18, 2026, 01:15 AM IST
17ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು.ಗಳ ಹಗರಣದ ರುವಾರಿ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು

ರಾಮನಗರ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು.ಗಳ ಹಗರಣದ ರುವಾರಿ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ನಾಗೇಂದ್ರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರಲ್ಲದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಹಾಡು ಹಾಡಿ ಟೀಕಿಸಿದರು.

ಸಚಿವ ಬಿ.ನಾಗೇಂದ್ರ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆ. ಬಡವರಿಗೆ ಸಿಗಬೇಕಾದ ಮನೆಗಳು, ಯುವಕರಿಗೆ ಸಾಲ ಸೌಲಭ್ಯಗಳು, ರೈತರಿಗೆ ಭೂಮಿ ಕೊಡುವುದಕ್ಕೆ ಖರ್ಚಾಗಬೇಕಿದ್ದ ಹಣ ತೆಲಂಗಾಣದ ಕಾಂಗ್ರೆಸ್ ಪಾರ್ಟಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಬಾರ್, ಬೇನಾಮಿ ಖಾತೆಗಳಿಗೆ ಕೋಟ್ಯಂತರ ರು.ಪಾಯಿ ಕಳುಹಿಸಿದ್ದಾರೆ ಎಂದು ದೂರಿದರು.

ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿಯು ಧ್ವನಿ ಎತ್ತಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 89 ಕೋಟಿ ಹಗರಣವಾಗಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದರು. ಈ ಹಗರಣದ ಹಣದಲ್ಲಿ ಹೈಕಮಾಂಡ್ ಪಾಲು ಸಹ ಇರುವುದರಿಂದಲೇ ಬಿ.ನಾಗೇಂದ್ರ ಅವರನ್ನು ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ನಾಗೇಂದ್ರ ಅವರಿಗೆ ಇಲ್ಲಿವರೆಗೂ ಕ್ಲೀನ್ ಚಿಟ್ ಸಿಕ್ಕಿಲ್ಲ. ಅವರ ವಿರುದ್ಧ ಈಗಲೂ ತನಿಖೆ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಅವರದೇ ಸಮುದಾಯದ ಬೇರೊಬ್ಬರಿಗೆ ಸಚಿವರನ್ನಾಗಿ ಮಾಡುವಂತೆ ಸದನ ಆರಂಭವಾಗುವ ಮೊದಲೇ ಬಿಜೆಪಿ ಆಗ್ರಹಿಸಿದೆ. ಹಾಗಾಗಿ ನಾಗೇಂದ್ರ ರಾಜೀನಾಮೆ ಪಡೆದು ಪರಿಶಿಷ್ಟ ಪಂಗಡಕ್ಕೆ ನ್ಯಾಯ ನೀಡಬೇಕು ಎಂದು ಪ್ರಸಾದ್ ಗೌಡ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಒಂದೊಂದು ಭ್ರಷ್ಟಾಚಾರ ಹೆಗಲಿನ ಮೇಲಿನ ಒಂದೊಂದು ಸ್ಟಾರ್ ಇದ್ದಂತೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರೊಂದಿಗೆ ಡಿ.ಕೆ.ಶಿವಕುಮಾರ್ ಅವರೂ ಪಾಲುದಾರರು. ಮತ್ತಷ್ಟು ಹಗರಣಗಳ ಮೂಲಕ ಲೂಟಿ ಮಾಡಲು ನಾಗೇಂದ್ರರಿಗೆ ಸಚಿವ ಸ್ಥಾನ ಉಡುಗೊರೆ ರೂಪದಲ್ಲಿ ನೀಡಿದ್ದಾರೆ ಎಂದು ಟೀಕಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ತಮಗೆ ಫೋನ್ ಮಾಡುವಂತೆ ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೀಗ ಭ್ರಷ್ಟಾಚಾರಿಯನ್ನೇ ಮುಖ್ಯಮಂತ್ರಿಗಳು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ನಾವು ಯಾರಿಗೆ ಫೋನ್ ಮಾಡಿ ದೂರು ಹೇಳಬೇಕು. ಡಿಕೆಶಿ ಸಚಿವ ಸಂಪುಟದಲ್ಲಿ ಇರುವವರೆಲ್ಲರೂ ಭ್ರಷ್ಟಾಚಾರಿಗಳೇ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ಪ್ರಕಾಶ್, ಎಸ್ಸಿ ಮೊರ್ಚಾ ತಾಲೂಕು ಅಧ್ಯಕ್ಷ ಉಮೇಶ್, ರಾಜ್ಯ ಪರಿಷತ್ತು ಸದಸ್ಯ ಸುರೇಶ್, ಮುಖಂಡರಾದ ರುದ್ರದೇವರು, ಚೇತನ್ , ಕಾಳಪ್ಪ, ವಿಶಾಲ್ ಜೈನ್, ನಾಗೇಶ್, ನಾಗರಾಜು, ಮಂಜು, ಬದರೀನಾಥ್, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು.

17ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹನೂರು ಎನ್‌ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹ
ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ