ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಉಪ್ಪಾರ ಜನಾಂಗ ಹಾಗೂ ದಲಿತ ಜನಾಂಗದ ನಡುವೆ ನಿವೇಶನ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯಲ್ಲಿದ್ದು ನ್ಯಾಯಾಲಯ ನೀಡುವ ತೀರ್ಪಿಗೆ ನಾವು ತಲೆಬಾಗುತ್ತೇವೆ, ಈ ನಡುವೆ ಗ್ರಾಮದ ಕೆಲವರು ಕೋಲಾರದ ಸಾಮಾಜಿಕ ಕಾರ್ಯಕರ್ತ ಸಂದೇಶ್ ಎಂಬುವರನ್ನು ಗ್ರಾಮಕ್ಕೆ ಕರೆಯಿಸಿ ಗೊಂದಲ ಸೃಷ್ಟಿಸುವ ಹನ್ನಾರ ನಡೆಸಿರುವುದು ಖಂಡನೀಯ ಎಂದು ಗ್ರಾಮದ ಮುಖಂಡ ಪಿ.ಮಾದೇಶ್ ಉಪ್ಪಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಉಪ್ಪಾರ ಜನಾಂಗ ಹಾಗೂ ದಲಿತ ಜನಾಂಗದ ನಡುವೆ ನಿವೇಶನ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯಲ್ಲಿದ್ದು ನ್ಯಾಯಾಲಯ ನೀಡುವ ತೀರ್ಪಿಗೆ ನಾವು ತಲೆಬಾಗುತ್ತೇವೆ, ಈ ನಡುವೆ ಗ್ರಾಮದ ಕೆಲವರು ಕೋಲಾರದ ಸಾಮಾಜಿಕ ಕಾರ್ಯಕರ್ತ ಸಂದೇಶ್ ಎಂಬುವರನ್ನು ಗ್ರಾಮಕ್ಕೆ ಕರೆಯಿಸಿ ಗೊಂದಲ ಸೃಷ್ಟಿಸುವ ಹನ್ನಾರ ನಡೆಸಿರುವುದು ಖಂಡನೀಯ ಎಂದು ಗ್ರಾಮದ ಮುಖಂಡ ಪಿ.ಮಾದೇಶ್ ಉಪ್ಪಾರ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂದೇಶ್ ಸೋಮವಾರ ಗ್ರಾಮಕ್ಕೆ ಭೇಟಿ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು ಎಂದರು. ಸಂದೇಶ್ ಗ್ರಾಮಕ್ಕೆ ಭೇಟಿ ನೀಡಿದರೆ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲಿದೆ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಅ.೪ ರಿಂದ ಒಂದು ತಿಂಗಳ ಕಾಲ ಜಿಲ್ಲೆಗೆ ಸಂದೇಶ್ ಪ್ರವೇಶವನ್ನು ನಿರ್ಬಂಧಿಸಿ ಆದೇಶಿಸಿದೆ ಎಂದರು.

ಈ ನಡುವೆ ಸಂದೇಶ್ ಅವರು ಟಿ.ನರಸೀಪುರಕ್ಕೆ ಬಂದು ಚಾಮರಾಜನಗರ ಜಿಲ್ಲೆಗೆ ನನ್ನನ್ನು ನಿರ್ಬಂಧಿಸಿರುವುದಕ್ಕೆ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರಣ ಎಂಬುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ, ನಮ್ಮ ಗ್ರಾಮದ ವಿಚಾರಕ್ಕೂ ಸಚಿವ ಸಿ.ಪುಟ್ಟರಂಗಶೆಟ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರಾಮದಲ್ಲಿ ಎರಡು ಜನಾಂಗದವರು ಅನೋನ್ಯವಾಗಿದ್ದು ಇಲ್ಲಿಯ ತನಕ ಯಾವುದೇ ಗಲಾಟೆಗಳಾಗಿಲ್ಲ. ನಿವೇಶನ ಪ್ರಕರಣ ನ್ಯಾಯಾಲಯದಲ್ಲಿದ್ದು ಅಲ್ಲಿ ಬರುವ ತೀರ್ಪಿಗೆ ಬದ್ಧರಾಗಿದ್ದೇವೆ ಎಂದರು.

ಗ್ರಾಮದ ದಲಿತ ಮುಖಂಡರು ಪದೇ ಪದೇ ಸಂದೇಶ್ ಅವರನ್ನು ಭೇಟಿ ಮಾಡಿ ಗ್ರಾಮಕ್ಕೆ ಆಹ್ವಾನಿಸುತ್ತಿರುವುದು ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು ನ್ಯಾಯ ಕೊಡಿಸಲು ಸಂದೇಶ್ ಅವರೇನು ನ್ಯಾಯಾಧೀಶರೇ ಎಂದು ಪ್ರಶ್ನಿಸಿದರು.

ಶಾಸಕರ ಕೈವಾಡದ ಶಂಕೆ:

ವೈ.ಕೆ.ಮೋಳೆ ಗ್ರಾಮದಲ್ಲಿ ಎರಡು ಜನಾಂಗಗಳ ನಡುವೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ವಿಫಲರಾಗಿದ್ದು, ಪದೇ ಪದೇ ಸಂದೇಶ್ ಅವರನ್ನು ಗ್ರಾಮಕ್ಕೆ ಕರೆಯಿಸಲು ನಡೆಸುತ್ತಿರುವ ಹುನ್ನಾರದ ಹಿಂದೆ ಶಾಸಕರ ಕೈವಾಡವಿರಬಹುದು ಎಂದು ಆರೋಪಿಸಿದರು.

ಕಳೆದ ೪ ವರ್ಷಗಳಿಂದಲೂ ಸಮಸ್ಯೆ ಇದ್ದರೂ ಇಲ್ಲಿಯ ತನಕ ಬಗೆಹರಿಸಲು ಮುಂದಾಗಿಲ್ಲ. ಪೊಲೀಸರು ಶಾಂತಿ ಸಭೆ ಕರೆದಿದ್ದರೂ ಅದನ್ನು ಶಾಸಕರು ರದ್ದುಪಡಿಸಿರುವ ಹನ್ನಾರ ಏನು? ಎಂದರು.

ಕೂಡಲೇ ಸಂದೇಶ್ ಅವರನ್ನು ಶಾಶ್ವತವಾಗಿ ಗಡಿಪಾರು ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಬೇಕು ಎಂದು ಪಿ.ಮಾದೇಶ್ ಆಗ್ರಹಿಸಿದರು.

ಗ್ರಾಮದ ಯಜಮಾನರಾದ ಜವರಶೆಟ್ಟಿ, ಕೃಷ್ಣಶೆಟ್ಟಿ, ಮುಖಂಡರಾದ ಶಿವಣ್ಣ, ಕೆಂಪರಾಜು, ದೊರೆಸ್ವಾಮಿ, ಮಾಜಿ ಯಜಮಾನ ವೆಂಕಟೇಶ್, ಗ್ರಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ ಇದ್ದರು.