ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ₹187 ಕೋಟಿ ಅವ್ಯವಹಾರ ಖಂಡಿಸಿ, ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ನಡೆಸಿದರು. ಮೆರವಣಿಗೆಯುದ್ದಕ್ಕೂರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕೆಲ ಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾಧ್ಯಕ್ಷ ಎಸ್. ನಿರಂಜನಕುಮಾರ್, ಬಾಲರಾಜು, ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಮತ್ತು ಸಾಮಾನ್ಯ ಜನರ ವಿರೋಧಿ ಸರ್ಕಾರ ಎಂದು ಆರೋಪಿಸಿದರು.ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಡಿದೆ. ಇದರಲ್ಲಿ ಸಚಿವ ನಾಗೇಂದ್ರ ಒಬ್ಬರು ರಾಜೀನಾಮೆ ನೀಡಿದರೆ ಸರಿಯಲ್ಲ. ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಯಿತು. ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ, ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಸುಳ್ಳು ಹೇಳುವ ಕಾಂಗ್ರೆಸ್ ಹಿಂದಿನಿಂದಲೂ ಸಂವಿಧಾನ ವಿರೋಧಿ ಕೆಲಸಗಳನ್ನೇ ಮಾಡುತ್ತಾ ಬಂದಿದೆ ಎಂದರು.ಪೆಟ್ರೋಲ್ ಪ್ರತಿ ಲೀಟರ್‌ಗೆ 3 ರು. ಡೀಸೆಲ್ ಪ್ರತಿ ಲೀಟರ್ ಗೆ 3.5 ರು. ಏರಿಕೆಯಾಯಿತು. ಈಗ ಹಾಲಿನ ದರ 2 ರು. ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಮಾಡಿದೆ. ಹಾಲಿನ ಬೆಲೆ ಹೆಚ್ಚಳದಲ್ಲಿ ಸಿದ್ದರಾಮಯ್ಯ ಸುಳ್ಳಿನ ಮೂಲಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಲೂಟಿಕೋರ ಸರ್ಕಾರ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಉಚಿತ ಭಾಗ್ಯಗಳ ಸಂಪೂರ್ಣ ಹೊರೆಯನ್ನು ಹೇರುವ ಮೂಲಕ ಉಚಿತ ಭಾಗ್ಯಗಳಿಂದಾಗಬಹುದಾದ ದುಷ್ಪರಿಣಾಮಗಳನ್ನು ಜನಸಾಮಾನ್ಯರು ಅನುಭವಿಸುವಂತಾಗಿದೆ. ಇದರಿಂದ ರಾಜ್ಯದ ಜನತೆ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದ್ದು ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದರು.ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದ ಸಿದ್ದರಾಮಯ್ಯನವರು ಬೆಲೆ ಏರಿಕೆ, ತೆರಿಗೆ ವಿಧಿಸಿ ಖಜಾನೆ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಸಾಮಾನ್ಯಜನರಿಗೆ ಅರಿವು ಮೂಡಿಸಿದರೆ, ಜನರೇ ಬೀದಿಗಿಳಿಯುತ್ತಾರೆ, ರಾಜ್ಯ ಬಿಜೆಪಿಯಿಂದ ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದೊಂದು ಭ್ರಷ್ಟ ಸರ್ಕಾರವಾಗಿದ್ದು ಮುಂದಿನ ದಿನಗಳಲ್ಲಿ ನಿರಂತರ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ಪತ್ರಿಭಟನೆಯಲ್ಲಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಜಯಸುಂದರ್, ವೆಂಕಟೇಶ್, ನೂರೊಂದುಶೆಟ್ಟಿ, ನಾಗಶ್ರೀ ಪ್ರತಾಪ್, ವೈಸಿ ನಾಗೇಂದ್ರ, ಉಡಿಗಾಲ ಕುಮಾರಸ್ವಾಮಿ, ಹನುಮಂತಶೆಟ್ಡಿ, ಸಿ.ಎನ್. ಬಾಲರಾಜು, ಅರಕಲವಾಡಿ ನಾಗೇಂದ್ರ, ಮೂಡಹಳ್ಳಿ ಮೂರ್ತಿ, ಸುರೇಶ್, ಚಂದ್ರಶೇಖರ್, ನಿಶಾಂತ್, ಬಾಲಸುಬ್ರಹ್ಮಣ್ಯಂ, ವಿರಾಟ್ ಶಿವು, ಆಶಾ, ಜಯಸೂರ್ಯ, ಆನಂದ್ ಭಗೀರಥ ಶಿವರಾಜ್, ಮನೋಜ್ ಪಟೇಲ್, ನಟರಾಜು ಕಮಲಮ್ಮ, ಮಮತಾ, ದ್ರಾಕ್ಷಾಯಿಣಿ, ರಾಜೇಶ್ವರಿ, ವನಜಾಕ್ಷಿ, ಮಹದೇವಸ್ವಾಮಿ, ಸೋಮಣ್ಣ, ಪುಟ್ಟಮಲ್ಲಪ್ಪ. ಗೋಪಾಲಕೃಷ್ಣ, ಪಿ. ರಂಗಸ್ವಾಮಿ, ಮಂಜುನಾಥ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇತರರು ಭಾಗವಹಿಸಿದ್ದರು.ಮುಜುಗರಕ್ಕೀಡಾದ ಚಾಮುಲ್ ಅಧ್ಯಕ್ಷನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ಮುಜುಗರಕ್ಕೀಡಾದ ಘಟನೆ ನಡೆಯಿತು. ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಪ್ರತಿಭಟನೆಯಲ್ಲಿ ಹಾಲಿನ ದರ ಏರಿಕೆ ಕುರಿತು ಮಾತನಾಡುತ್ತಿದ್ದಾಗ ಅಲ್ಲಿಯೇ ಇದ್ದ ಚಾಮುಲ್ ಅಧ್ಯಕ್ಷ ನಾಗೇಂದ್ರ ಅವರನ್ನು ಅರ್ಧ ಲೀ.ಹಾಲಿಗೆ ಹೆಚ್ಚುವರಿಯಾಗಿ 50 ಮಿ.ಲೀ ಸೇರಿಸಿರುವುದು ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೆ ನಾಗೇಂದ್ರ ಅವರು ಹೌದು ಎಂದರು. ಪ್ರತಿಭಟನೆಯಲ್ಲಿದ್ದ ಮಹಿಳೆಯರನ್ನು 50 ಮಿ.ಲೀ ಸೇರಿಸಿರುವುದು ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೆ ಮಹಿಳೆಯರು ಅರ್ಧ ಲೀ. ಹಾಲಿಗೆ 50 ಮಿ.ಲೀ ಸೇರಿಸಿಲ್ಲ ಎಂದರು. ಇದರಿಂದ ಎನ್. ಮಹೇಶ್ ಯಾಕೆ ಸುಳ್ಳು ಹೇಳುತ್ತೀರಿ ನಾಗೇಂದ್ರ ಅವರೇ ನಿಮಗೆ ಭಯವಾದರೆ ರಾಜೀನಾಮೆ ಕೊಟ್ಟು ಬಂದುಬಿಡಿ ಎಂದರು. ಇದರಿಂದ ಚಾಮುಲ್ ಅಧ್ಯಕ್ಷರು ಮುಜುಗರಕ್ಕೊಳಗಾದರು.