ಕೊಪ್ಪಳ: ರೈತರ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಭಾರತೀಯ ಜನತಾ ಪಾರ್ಟಿ ಜಿಲ್ಲಾ ರೈತ ಮೋರ್ಚಾದಿಂದ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನವೀನಕುಮಾರ್ ಗುಳಗಣ್ಣನವರ, ನಗರದಲ್ಲಿ ಹಾಲಿನ ಪ್ರೋತ್ಸಾಹ ₹716 ಕೋಟಿ ಬಿಡುಗಡೆ ಮಾಡದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ರೈತರ ಹಿತವನ್ನೇ ಮರೆತಂತೆ ಕಾಣುತ್ತಿದೆ. ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸಹಾಯ ನೀಡಬೇಕಾದ ಸರ್ಕಾರ ನ್ಯಾಯಯುತವಾಗಿ ಕೊಡಬೇಕಾಗಿರುವ ಪ್ರೋತ್ಸಾಹಧನ ನೀಡದೇ ಸತಾಯಿಸುತ್ತಿದೆ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸಿ ಆಡಳಿತ ಮಾಡಲು ಮುಂದಾಗುತ್ತಿದೆಯೇ ಹೊರತು ತನ್ನ ಜವಾಬ್ದಾರಿ ಮರೆತಿದೆ. ರಾಜ್ಯದಲ್ಲಿ ರೈತರ ಅನೇಕ ಸಮಸ್ಯೆಗಳನ್ನು ಇದ್ದರೂ ಸ್ಪಂದಿಸದೇ ಆಟವಾಡುತ್ತಿದೆ. ಮಾತ್ತೆತ್ತಿದರೆ ಕೇಂದ್ರದ ಕಡೆ ಬೊಟ್ಟು ಮಾಡುವ ರಾಜ್ಯ ಸರ್ಕಾರ ಮೊದಲು ತನ್ನ ಜವಾಬ್ದಾರಿ ನಿಭಾಯಿಸಲಿ ಎಂದು ತಾಕೀತು ಮಾಡಿದರು.ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಕೊಡಬೇಕಾದ ಹಾಲಿನ ಪ್ರೋತ್ಸಾಹಧನವನ್ನು ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲಂಕೇಶ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಂದಪ್ಪ ಯಲ್ಲಮ್ಮನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಗೇರ, ಸುನೀಲ, ಶಿವಕುಮಾರ ಅರಕೇರಿ, ಜಿಲ್ಲಾ ವಕ್ತಾರ ಮಹೇಶ ಅಂಗಡಿ, ನರಸಿಂಗರಾವ ಕುಲಕರ್ಣಿ, ವಾಣಿಶ್ರೀ ಮಠದ, ಮಂಜುಳಾ ಕರಡಿ, ಗೀತಾ ಪಾಟೀಲ, ಮಹಾಲಕ್ಷ್ಮಿ ಕಂದಾರಿ, ಚೆನ್ನಬಸವ ಗಾಳಿ, ಕಾಶಿನಾಥ ಚಿತ್ರಗಾರ, ಸಂಗಯ್ಯಸ್ವಾಮಿ ಸಂಶಿಮಠ, ಶ್ರೀನಿವಾಸ ಧೂಳ, ರಾಧಾ ಉಮೇಶ, ಶೋಭಾ ರಾಯಬಾಗಿ, ಶೈಲಜಾ, ಗಿರಿಜಮ್ಮ ತಳಕಲ, ರಾಜು ವಸ್ತ್ರದ್, ಹುಲುಗಪ್ಪ, ನೀಲಕಂಠಯ್ಯ ಹಿರೇಮಠ, ಪುಟ್ಟರಾಜ, ರಮೇಶ ಭಾಗವಹಿಸಿದ್ದರು.