ಹಿರೇಕೆರೂರು: ಹಿರೇಕೆರೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಸರ್ಕಾರ ರಾಜ್ಯದ 23 ತಾಲೂಕುಗಳನ್ನು ಮತ್ತೆ ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕನ್ನು ಹೊರತುಪಡಿಸಿರುವುದು ದುರ್ದೈವದ ಸಂಗತಿಯಾಗಿದೆ. ಸರ್ಕಾರ ಹಿರೇಕೆರೂರ ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ತಾಲೂಕಿನಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ. ಯಾವ ಮಾನದಂಡದ ಆಧಾರದ ಮೇಲೆ ತಾಲೂಕನ್ನು ಬರಗಾಲ ಘೋಷಣೆಯಿಂದ ಕೈಬಿಡಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ ಅವರು, ತಾಲೂಕಿನಲ್ಲಿ ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ಸಮರ್ಪಕ ಬೆಳೆ ಹಾಗೂ ಇಳುವರಿ ದೊರೆತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರೇಕೆರೂರು ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡದಿರುವುದು ರೈತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಕೂಡಲೇ ಹಿರೇಕೆರೂರು ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ರುದ್ರಪ್ಪ ಲಮಾಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಹಿರೇಕೆರೂರ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಮಂಡಲ ಅಧ್ಯಕ್ಷರಾದ ಸಂಜೀವಯ್ಯ ಕಬ್ಬಿಣಕಂತಿಮಠ, ದೇವರಾಜ ನಾಗಣ್ಣನವರ, ಜಿ.ಪಿ. ಪ್ರಕಾಶ, ರವಿಶಂಕರ ಬಾಳಿಕಾಯಿ, ಜಗದೀಶ ದೊಡ್ಡಗೌಡ್ರ, ಶಿವಕುಮಾರ ತಿಪ್ಪಶೆಟ್ಟಿ, ಗುರುಶಾಂತಪ್ಪ ಎತ್ತಿನಹಳ್ಳಿ, ಹುಚ್ಚನಗೌಡ ಕಬ್ಬಕ್ಕಿ, ಬಸಮ್ಮ ಅಬಲೂರು, ಪುಟ್ಟನಗೌಡ ಪಾಟೀಲ, ಬಸವರಾಜ ಕಾಲ್ವಿಹಳ್ಳಿ, ರುದ್ರಗೌಡ ನೀಲನಗೌಡ್ರ, ಉಮೇಶ ಬಣಕಾರ, ಹನುಮಂತಪ್ಪ ಕುರುಬರ, ಪ್ರವೀಣ ತಳವಾರ, ಹೊನ್ನಪ್ಪ ಸಾಲಿ ಸೇರಿದಂತೆ ಕಾರ್ಯಕರ್ತರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.