ಬಳ್ಳಾರಿ ನಗರ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರು ಪೂರೈಕೆಯ ಉದ್ದೇಶದಿಂದ ಆರಂಭಿಸಿರುವ ಯೋಜನೆ ಪ್ರಕ್ರಿಯೆ ಶುರು
ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ಜನರಿಗೆ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಸುವ ಒಟ್ಟು ₹1200 ಕೋಟಿ ಯೋಜನೆಯಲ್ಲಿ ಮೊದಲ ಹಂತದ ₹260 ಕೋಟಿ ಅನುದಾನದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ಬಾಗಿಲಿಗೆ ಬಂತು ಸರ್ಕಾರ- ಸೇವೆಗೆ ಇರಲಿ ಸಹಕಾರ ಎಂಬ ಆಶಯದೊಂದಿಗೆ ಬಳ್ಳಾರಿ ತಾಲೂಕಾಡಳಿತದಿಂದ ನಗರದ ಮಿಲ್ಲರಪೇಟೆ ಪ್ರದೇಶದ 13 ನೇ ವಾರ್ಡ್ ನ ಗಣೇಶ ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ನಗರ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರು ಪೂರೈಕೆಯ ಉದ್ದೇಶದಿಂದ ಆರಂಭಿಸಿರುವ ಯೋಜನೆ ಪ್ರಕ್ರಿಯೆ ಶುರುಗೊಂಡಿದ್ದು, ಕುಡಿವ ನೀರು ಸೇರಿದಂತೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅದೇ ರೀತಿ ವಸತಿ ರಹಿತರಿಗೆ ನಿವೇಶನ ನೀಡುವ ಯೋಜನೆಯಡಿ ಬಳ್ಳಾರಿ ನಗರದಲ್ಲಿ ಅರ್ಹ ಬಡ ಜನರಿಗೆ ಜನವರಿ ಒಳಗಾಗಿ 10 ಸಾವಿರ ನಿವೇಶನ ವಿತರಿಸುವ ಗುರಿ ಹೊಂದಲಾಗಿದೆ. ಸರ್ಕಾರದ ಯೋಜನೆ ಹಾಗೂ ಸೌಲಭ್ಯ ನೇರವಾಗಿ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಮುಂದಿನ 10 ಪ್ರಜಾಸೇವೆ ಕಾರ್ಯಕ್ರಮಗಳ ದಿನಾಂಕ, ಸಮಯ ಮತ್ತು ಸ್ಥಳ ಮುಂಚಿತವಾಗಿ ನಿಗದಿಪಡಿಸಿ, ಆಯಾ ಪ್ರದೇಶಗಳಲ್ಲಿ ಒಂದು ವಾರ ಮುಂಚಿತವಾಗಿಯೇ ತ್ಯಾಜ್ಯ ಸಂಗ್ರಹಣೆ ವಾಹನಗಳ ಮೂಲಕ ಮತ್ತು ಆಟೋಗಳ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು ಎಂದು ಸೂಚಿಸಿದರು.
ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಬಡ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರಜಾಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ಮತ್ತು ಆಟೋ ಮೊದಲಾದ ಖರ್ಚು ತಪ್ಪಿಸಲು ಸ್ಲಂ ಪ್ರದೇಶಗಳಿಗೆ ನಾವೇ ನೇರವಾಗಿ ಭೇಟಿ ನೀಡುತ್ತಿದ್ದೇವೆ. ಜನರ ನ್ಯಾಯಯುತ ಸಮಸ್ಯೆ ಅಧಿಕಾರಿಗಳು ಸ್ಥಳದಲ್ಲೇ ಪರಿಹರಿಸಬೇಕು ಅಥವಾ 15 ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡಬೇಕು. ಜನರ ಸಮಸ್ಯೆಗಳ ನಿವಾರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರುವ ಅಥವಾ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಿ ಅಮಾನತು ಮಾಡಿಸಲಾಗುವುದು ಎಂದು ಎಚ್ಚರಿಸಿದರು.
ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹಾಗೂ ಮೇಯರ್ ಪಿ. ಗಾದೆಪ್ಪ ಮಾತನಾಡಿದರು.
ಪ್ರಜಾಸೇವಾ ಇಲಾಖೆಯಿಂದ ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲು ನೇರವಾಗಿ ಸ್ವೀಕರಿಸುವ ಉದ್ದೇಶದಿಂದ ಕೌಂಟರ್ ಮಳಿಗೆ ತೆರೆಯಲಾಗಿತ್ತು. ನಾಗರಿಕರು ಭಾಗವಹಿಸಿ ತಮ್ಮ ಪ್ರದೇಶದ ಮೂಲಸೌಕರ್ಯ, ಕುಡಿಯುವ ನೀರು, ರಸ್ತೆ ದುರಸ್ತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.
ಸಾರ್ವಜನಿಕರಿಂದ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿ ಪರಿಶೀಲಿಸಿದ ಅಧಿಕಾರಿಗಳು, ಅವುಗಳನ್ನು ಐಪಿಜಿಆರ್‌ಎಸ್ ನಲ್ಲಿ ದಾಖಲಿಸಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿ ಕಾಲಮಿತಿಯೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜನರ ಸಮಸ್ಯೆ ತ್ವರಿತವಾಗಿ ಬಗೆಹರಿಸಲು ಇಂತಹ ನೇರ ಸಂಪರ್ಕ ವೇದಿಕೆಗಳು ಸಹಕಾರಿಯಾಗಲಿವೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಬಳ್ಳಾರಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಇನ್ನಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.