ವಾಲ್ಮೀಕಿ ನಿಗಮದ ಹಣ ಲೂಟಿ ಹಗರಣದ ಪ್ರಮುಖ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರನ್ನು ತಕ್ಷಣ ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರಿಂದ ಬಂಧನ, ಬಳಿಕ ಬಿಡುಗಡೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಾಲ್ಮೀಕಿ ನಿಗಮದ ಹಣ ಲೂಟಿ ಹಗರಣದ ಪ್ರಮುಖ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರನ್ನು ತಕ್ಷಣ ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ನಗರದ ಸರ್ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ ಮೂರು ದಿನಗಳಿಂದಲೂ ಧರಣಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಬಳಿಕ ಕಾರ್ಯಕರ್ತರು ಸಮೀಪದಲ್ಲೇ ಇದ್ದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ, ಶಿವಕುಮಾರ್ ಆರಾಧ್ಯ, ಕೃಷ್ಣ ಅಂಕಪ್ಪ, ರಮೇಶ್, ಕ್ರಾಂತಿ ಮಂಜು, ಚಾಮರಾಜು ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆ ವೇಳೆ ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಮಾತನಾಡಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿದ್ದ 187 ಕೋಟಿ ರು.ಗಳ ಪೈಕಿ 88.62 ಕೋಟಿಯಿಂದ 89.9 ಕೋಟಿ ಹಣವನ್ನು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಅಕ್ರಮವಾಗಿ ವರ್ಗಾಹಿಸಲಾಗಿದೆ. ಸರ್ಕಾರದ ಕಣ್ಣು ತಪ್ಪಿಸಲು ನಿಗಮದ ಅಧಿಕೃತ ಖಾತೆಯನ್ನು ಬೆಂಗಳೂರಿನ ಎಂ.ಜಿ.ರಸ್ತೆ ಶಾಖೆಗೆ ರಾಜಕೀಯ ಒತ್ತಡದ ಮೂಲಕ ದಿಢೀರನೇ ಬದಲಾಯಿಸಲಾಗಿದೆ ಎಂದು ಆರೋಪಿಸಿದರು.
ಬುಡಕಟ್ಟು ರೈತರ ನೀರಾವರಿಗಾಗಿ ಕೊಳವೆ ಬಾವಿಗಳನ್ನು ಒದಗಿಸಲು ಗಂಗಾ ಕಲ್ಯಾಣ ಯೋಜನೆಗೆ ಮೀಸಲಾಗಿದ್ದ 43.33 ಕೋಟಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಲೂಟಿ ಮಾಡಿದ ಹಣವನ್ನು ಹೈದರಾಬಾದ್‌ನ ಶೆಲ್ ಕಂಪನಿಗಳು ಮತ್ತು ಸಹಕಾರಿ ಸಂಘಗಳ ಮೂಲಕ ಸಾಗಿಸಿ ನಗದು ಮತ್ತು ಚಿನ್ನದ ಬಿಸ್ಕತ್‌ಗಳಾಗಿ ಪರಿವರ್ತಿಸಿರುವುದು ತನಿಖೆಯಲ್ಲಿ ಸಾಭಿತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕಾಗಿ ಪರಿಶಿಷ್ಟ ಪಂಗಡದ ಕಲ್ಯಾಣ ನಿಧಿಯಿಂದ 20.19 ಕೋಟಿ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ದೂರಿದರು.
ನಾಗೇಂದ್ರ ಅವರ ಮೇಲಿನ ಆರೋಪಿಗಳು ಸಾಭಿತಾದ ಕಾರಣ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರೂ ಸಹ ಜೈಲಿನಲ್ಲಿ ಇದ್ದರು. ನ್ಯಾಯಾಲಯ ಜಾಮೀನು ನೀಡಿದ ನಂತರವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಸಿಎಂ ಡಿ.ಕೆ.ಶಿವಕುಮಾರ್ ಅವರು ಮತ್ತೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಟ್ಯಂತರ ಹಣ ಅಕ್ರಮ ವರ್ಗಾವಣೆಗೆ ತಮಗೆ ತೀವ್ರ ರಾಜಕೀಯ ಒತ್ತಡವಿತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ ಅವರು, ನಾಗೇಂದ್ರ ಅವರ ವಿರುದ್ಧ ಸಾಕಷ್ಟು ಆರೋಪಗಳು ಇದ್ದರೂ ಸಹ ಕಾಂಗ್ರೆಸ್ ಎಲ್ಲ ನಾಯಕರ ಮೇಲೂ ಪ್ರಕರಣಗಳಿವೆ. ಅಂದ ಮಾತ್ರಕ್ಕೆ ಅವರು ಆಪಾಧಿತರಲ್ಲ. ಆರೋಪಿಯಾಗಿದ್ದಾರೆ. ಅವರ ಮೇಲಿನ ಆರೋಪ ಸಾಭಿತಾಗಿಲ್ಲ ಎಂಬ ಸುಳ್ಳಿನ ಕಟ್ಟು ಕಥೆ ಕಟ್ಟುತ್ತಿದ್ದಾರೆ ಎಂದು ದೂರಿದರು.
ಮತ್ತೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಯಾರನ್ನು ರಕ್ಷಿಸಲು ಮುಂದಾಗಿದ್ದೀರಿ. ನಾಗೇಂದ್ರ ಬಾಯಿ ಬಿಟ್ಟರೆ ದೆಹಲಿಯ ಕಾಂಗ್ರೆಸ್ ಹೈಕಮಾಂಡ್‌ಗೆ ಹೋದ ಹಣದ ರಹಸ್ಯ ಬಯಲಾಗುತ್ತದೆ ಎಂಬ ಭಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು. ತಕ್ಷಣ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಸನ್ನಕುಮಾರ್, ಶಿವಣ್ಣ, ಕೃಷ್ಣ, ಶಾಂತಮ್ಮ, ವಿವೇಕ್ , ಪೀಹಳ್ಳಿ ರಮೇಶ್, ಬಿ.ಸಿ.ಸಂತೋಷ್ ಕುಮಾರ್, ಹನಿಯಂಬಾಡಿ ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.