ಸಂಪುಟದಿಂದ ಸಚಿವ ನಾಗೇಂದ್ರ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮಡಿಕೇರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರೂ.೧೮೭ ಕೋಟಿ ಆರ್ಥಿಕ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈ ಹಿಂದೆ ರಾಜೀನಾಮೆ ನೀಡಿದ್ದ ಸಚಿವ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸೋಮವಾರಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ಸಚಿವ ಸ್ಥಾನ ವಿಸ್ತರಣೆ ಸಂದರ್ಭ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರು.೧೮೭ ಕೋಟಿ ಆರ್ಥಿಕ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿ.ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಿ ಕಾಂಗ್ರೆಸ್ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ ಎಂದರು.ಸಚಿವ ನಾಗೇಂದ್ರ ಅವರು ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಸಚಿವ ಸ್ಥಾನ ಅಲಂಕರಿಸಿರುವುದು ಖಂಡನೀಯ. ಆದ್ದರಿಂದ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದರು.ಜಿಲ್ಲಾ ವಕ್ತಾರ ಅಭಿಮನ್ಯು ಮಾತನಾಡಿ, ತೆಲಂಗಾಣದಲ್ಲಿ ನಡೆದ ಚುನಾವಣೆಗೆ ಬಿ.ನಾಗೇಂದ್ರ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪವಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಇಂತವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಅರುಣ್ ಕುಮಾರ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಎಸ್.ಸಿ ಮೋರ್ಚಾದ ಅಧ್ಯಕ್ಷ ಪಿ.ಎಂ.ರವಿ, ಸೋಮವಾರಪೇಟೆ ಮಂಡಲ ಬಿಜೆಪಿಯ ಉಪಾಧ್ಯಕ್ಷರಾದ ಕನಕಮ್ಮ, ಎಂ.ಪಿ.ಕೃಷ್ಣಪ್ಪ, ಪ್ರದಾನ ಕಾರ್ಯದರ್ಶಿಗಳಾದ ದರ್ಶನ್ ಜೋಯಪ್ಪ, ಸೋಮೇಶ್, ಪ್ರಮುಖರಾದ ಸಂಜು ಪೊನ್ನಪ್ಪ, ಸುನಿಲ್ ಕುಮಾರ್ ಸೇರಿದಂತೆ ಸೋಮವಾರಪೇಟೆ ಮಂಡಲ ಬಿಜೆಪಿಯ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.