ಕಾಸರಗೋಡು: ಯಕ್ಷಗಾನಕ್ಕೆ ಮೂಲ ಪುರುಷ ಕವಿ ಪ್ರಾರ್ಥಿಸುಬ್ಬ ಅವರ ತವರೂರಾದ ಗಡಿನಾಡಿನ ಕಲಾವಿದರು, ಸಂಸ್ಥೆಗಳು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಮಂಜೇಶ್ವರ ಕಡಂಬಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ದೇವಳದ ಸಹಕಾರದಲ್ಲಿ ಮಂಜೇಶ್ವರ ಹೊಸಂಗಡಿಯ ಯಕ್ಷ ಬಳಗ ಹಮ್ಮಿಕೊಂಡ 36ನೇ ವರ್ಷದ ತಾಳಮದ್ದಳೆ ಕೂಟ-ಗಡಿನಾಡ ಯಕ್ಷ ಸಂಭ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಹ ನೀಡುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದು ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದರು.

ಕಾಸರಗೋಡು ಜಿಪಂ ಸದಸ್ಯ ಹರ್ಷದ್ ವರ್ಕಾಡಿ ಮಾತನಾಡಿ, ಕಾಸರಗೋಡು ಗಡಿನಾಡ ಭಾಗವಾಗಿದ್ದರೂ, ಇಲ್ಲಿನ ಜನರು ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುತ್ತಾರೆ ಎಂದರು.

ದೇವಸ್ಥಾನದ ಮೊಕ್ತೇಸರ ಸೂರ್ಯನಾರಾಯಣ ಅಯ್ಯ, ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ರಾವ್, ಯಕ್ಷಗಾನ ಅಕಾಡೆಮಿ ಸದಸ್ಯರ ರಾಘವ ಎಚ್., ಗುರುರಾಜ ಭಟ್, ರಾಜೇಶ್ ಕುಳಾಯಿ, ಸುಧಾಕರ ಶೆಟ್ಟಿ ಉಳ್ಳಾಲ, ವಿನಯ ಕುಮಾರ್ ಶೆಟ್ಟಿ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.


ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದ ಸಿರಿಬಾಗಿಲು ರಾಮಕೃಷ್ಣ ಮಯ್ಯರನ್ನು ಗೌರವಿಸಲಾಯಿತು. ಹಿಮ್ಮೇಳ ಕಲಾವಿದ ಕೇಶವ ಆಚಾರ್ಯ ಕಿನ್ಯರಿಗೆ ಯಕ್ಷ ಬಳಗ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ಹರಿಶ್ಚಂದ್ರ ನಾಯಕ್ ಅಭಿನಂದನಾ ನುಡಿಗಳನಾಡಿದರು, ಅಕಾಡೆಮಿಯ ಸದಸ್ಯ ಸಂಚಾಲಕ ಸತೀಶ್ ಅಡಪ ಸಂಕಬೈಲು ಸ್ವಾಗತಿಸಿದರು. ನಾಗರಾಜ ಪದಕಣ್ಣಾಯ ವಂದಿಸಿದರು.