ಮಂಗಳೂರು: ವೃದ್ಧಾಪ್ಯದಿಂದ ನಡೆದಾಡಲು ಅಸಾಧ್ಯ, ರಸ್ತೆ ಸಮಸ್ಯೆಯಿಂದ ವಾಹನವೂ ತೆರಳದ ಸ್ಥಿತಿ. ಪರಿಣಾಮ ಅಂಚೆ ಇಲಾಖೆಯ ಆಧಾರ್ ಸಿಬ್ಬಂದಿ ಕಂಪ್ಯೂಟರ್‌ನ್ನು 1 ಕಿ.ಮೀ. ದೂರ ಹೊತ್ತು ಸಾಗಿ ವೃದ್ಧೆಯೋರ್ವರಿಗೆ ಆಧಾರ್ ಸೇವೆ ಒದಗಿಸಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿ ನಡೆದಿದೆ.
ಅಮ್ಟಾಡಿ ಗ್ರಾಮದ 87 ವರ್ಷದ ವೃದ್ಧೆ ಜೂಲಿಯಾನ ಎಂಬವರ ಆಧಾರ್ ನವೀಕರಣ ಆಗದೇ ಸರ್ಕಾರದ ಸವಲತ್ತು ಸಿಗಲು ಅಡಚಣೆಯಾಗಿತ್ತು. ಆಧಾರ್ ನವೀಕರಣ ಸೇವೆ ಮಾಡಿಸಲು ವೃದ್ಧೆಗೆ ಆಧಾರ್ ಸೇವಾ ಕೇಂದ್ರಕ್ಕೆ ತೆರಳು ವೃದ್ದಾಪ್ಯದಿಂದ ನಡೆದಾಡಲು ಸಾಧ್ಯವಿರಲಿಲ್ಲ. ವಾಹನದಲ್ಲಿ ಹೋಗೋಣ ಎಂದರೇ ರಸ್ತೆ ಸಂಪರ್ಕ ಸಮಸ್ಯೆ ಅಲ್ಲಿತ್ತು.ಇಲ್ಲಿನ ಸಮಸ್ಯೆ ಅರಿತ ಮೋಡಂಕಾಪು ಅಂಚೆ ಶಾಖಾ ಕಚೇರಿಯ ಅಂಚೆ ವಿತರಕಿ ಸವಿತಾ ಅವರು ಅಂಚೆ ಇಲಾಖೆಯ ಆಧಾರ್ ಸೇವಾ ಸಿಬ್ಬಂದಿಗೆ ತಿಳಿಸಿದ್ದರು. ಸ್ಪಂದಿಸಿದ ಪುತ್ತೂರು ವಿಭಾಗದ ಸಿಸ್ಟಮ್ ಆಡಳಿತಾಧಿಕಾರಿ ನೂತನ ಬಂಗೇರ ಅವರು ವೃದ್ಧೆಯ ಮನೆಯವರ ಸಹಕಾರದಲ್ಲಿ ಸುಮಾರು 1 ಕಿ.ಮೀ. ದೂರದವರೆಗೆ ಗುಡ್ಡದ ಪ್ರದೇಶಕ್ಕೆ ಆಧಾರ್ ಮಾಡಿಸುವ ಕಂಪ್ಯೂಟರ್ ಮತ್ತಿತರ ಸೊತ್ತುಗಳನ್ನು ಹೊತ್ತು ಸಾಗಿ ವೃದ್ಧೆಯ ಮನೆಗೆ ತೆರಳಿ ಆಧಾರ್ ನವೀಕರಣ (ಬಯೋ ಮೆಟ್ರಿಕ್ ಅಪ್‌ಡೇಟ್, ಮೊಬೈಲ್ ನಂಬರ್ ಅಪ್‌ಡೇಟ್) ಕಾರ್ಯವನ್ನು ಸ್ಥಳದಲ್ಲೇ ಯಶಸ್ವಿಯಾಗಿ ಪೂರ್ಣಗೊಳಿಸಿದರು.ಅಂಚೆ ಇಲಾಖೆ-ಆಧಾರ್ ಸೇವಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಇಲಾಖೆಯ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.100ಕ್ಕೂ ಅಧಿಕ ಸೇವೆ: ನಡೆದಾಡಲು ಅಸಾಧ್ಯವಾಗಿರುವವರ ಬಳಿಗೆ, ವಿಶೇಷ ಚೇತನರ ಆಶ್ರಮಗಳಿಗೆ, ಮನೆಗಳಿಗೆ ತೆರಳಿಗೆ ಅವರಿಗೆ ಆಧಾರ್ ಸೇವೆ ಒದಗಿಸುವ ಕೆಲಸವನ್ನು ಅಂಚೆ ಇಲಾಖೆಯ ಆಧಾರ್ ಸೇವಾ ವಿಭಾಗ ನಡೆಸುತ್ತಿದೆ. ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಈವರೆಗೆ 100ಕ್ಕೂ ಅಧಿಕ ಕಡೆಗಳಿಗೆ ಮನೆಗೆ ತೆರಳಿ ಆಧಾರ್ ಸೇವೆ ನೀಡಲಾಗಿದೆ ಎನ್ನುತ್ತಾರೆ ನೂತನ ಬಂಗೇರ.