ಉಡುಪಿ: ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ 75 ಮೀ. ವ್ಯಾಪ್ತಿಯ ಇಕ್ಕೆಲಗಳಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಉಡುಪಿ ಜಿಲ್ಲೆ ರಾಹೆ 66ರಲ್ಲಿ ಈ ಆದೇಶ ಪಾಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು, ಆದೇಶ ಉಲ್ಲಂಘನೆಯಾಗಿದ್ದರೇ ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಚರ್ಚಿಸಲಾಗುವುದು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ರಜತಾದ್ರಿಯ ಸಂಸದರ ಕಚೇರಿಯಲ್ಲಿ ರಾಹೆ 66 ರ ಸರ್ವೀಸ್ ರಸ್ತೆ, ಮೇಲ್ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೇರಳ ಮಾದರಿ ರಸ್ತೆ: ಕೇರಳ ಮಾದರಿಯಲ್ಲಿ ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಾಣ ಮಾಡುವ ಚಿಂತನೆ ಇದೆ ಎಂದ ಸಂಸದರು, ಅಪಘಾತ ರಹಿತ ಸುಗಮ ಸಂಚಾರಕ್ಕೆ ಜಿಲ್ಲೆಯ ರಾಹೆಯಲ್ಲಿ ಬಾಕಿ ಇರುವ ಸರ್ವೀಸ್ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ರಾ. ಹೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾ.ಹೆ. 66 ರಲ್ಲಿ ಪ್ರಮುಖವಾಗಿ ಕೋಟೇಶ್ವರ ಜಂಕ್ಷನ್‌ನಿಂದ ಬೀಜಾಡಿ ಕ್ರಾಸ್‌ವರೆಗಿನ 830 ಮೀ., ಬೀಜಾಡಿ–ಕುಂಭಾಶಿ–ತೆಕ್ಕಟ್ಟೆ ಭಾಗದಲ್ಲಿ ಇಕ್ಕೆಲಗಳಲ್ಲಿ 3,500 ಮೀ., ತೆಕ್ಕಟ್ಟೆ ಭಾಗದಲ್ಲಿ 1,020 ಮೀ., ಬ್ರಹ್ಮಾವರ ಭಾಗದಲ್ಲಿ 400 ಮೀ., ಸಂತೇಕಟ್ಟೆ ಭಾಗದಲ್ಲಿ 1,000 ಮೀ., ಉದ್ಯಾವರ ಜಂಕ್ಷನ್‌ನಲ್ಲಿ 325 ಮೀ. ಬಾಕಿ ಉಳಿದಿರುವ ಸರ್ವೀಸ್ ರಸ್ತೆ ಕಾಮಗಾರಿಗಳನ್ನುಆದ್ಯತೆಯ ಮೇಲೆ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದವರು ಸೂಚಿಸಿದರು. ಕೆಲವು ಕಡೆಗಳಲ್ಲಿ ಇನ್ನೂ ಸರ್ವೀಸ್ ರಸ್ತೆ ಕಾಮಗಾರಿಯೇ ಪ್ರಾರಂಭಿಸಿಲ್ಲ, ಚರಂಡಿಗಳ ಸಮರ್ಪಕವಾಗಿಲ್ಲ, ಕಾಮಗಾರಿಯಲ್ಲಿ ಗುಣಮಟ್ಟ ಹಾಗೂ ಸಂಚಾರ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅವರು ಸೂಚಿಸಿದರು. ಉಡುಪಿಯ ನಿಟ್ಟೂರು ಮತ್ತು ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಬಳಿ ಸ್ಥಳ ಪರಿಶೀಲಿಸಿ, ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಲಾಗುವುದು ಎಂದವರು ಹೇಳಿದರು. ಸಭೆಯಲ್ಲಿ ರಾಹೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಆಜ್ಮಿ, ಇಂಜಿನಿಯರ್ ಅಲೋಕ್ ಎಂ, ಎನ್.ಆರ್ ಗೋಸ್ವಾಮಿ, ವಿಘ್ನೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.