ಬಳ್ಳಾರಿ: ತುಂಗಭದ್ರಾ ಕೊಳ್ಳದ ನಾಲ್ಕು ಜಿಲ್ಲೆಗಳ ಎರಡನೇ ಬೆಳೆಗೆ ನೀರು ಕೊಡಬೇಕು, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಿಧಾನಪರಿಷತ್‌ನ ಬಿಜೆಪಿ ಸಚೇತಕ ರವಿಕುಮಾರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಸೀಟ್ ಗಲಾಟೆಯಲ್ಲಿ ರೈತರು ಸಾಯುತ್ತಿದ್ದಾರೆ. ರಾಜ್ಯದಲ್ಲಿ ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭವಾಗಿಲ್ಲ. ಹೀಗಾಗಿ, ಖಾಸಗಿಯವರು ಇಷ್ಟದ ದರಕ್ಕೆ ಮೆಕ್ಕೆಜೋಳ ಖರೀದಿಸುತ್ತಿದ್ದಾರೆ. ತುಂಗಭದ್ರಾ ನೀರಿನಿಂದ ನಾಲ್ಕು ಜಿಲ್ಲೆಗಳ 16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎರಡು ಬೆಳೆ ಭತ್ತ ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ಎರಡನೇ ಬೆಳೆ ಬೆಳೆಯಲಾಗುತ್ತಿಲ್ಲ. ಗೇಟ್ ಸರಿ ಇಲ್ಲ ಎಂದು ನೀರನ್ನು ಆಂಧ್ರಕ್ಕೆ ಬಿಡಲಾಗುತ್ತಿದೆ. ಆದ್ದರಿಂದ ಎರಡನೇ ಬೆಳೆಗೆ ನೀರು ಕೊಡಲಾಗದಿದ್ದರೆ ಸರ್ಕಾರ ಪರಿಹಾರ ರೂಪದಲ್ಲಿ ಹಣ ನೀಡಬೇಕು. ಒಂದು ಹೆಕ್ಟೇರ್‌ಗೆ ₹25 ಸಾವಿರದಂತೆ 16 ಲಕ್ಷ ಹೆಕ್ಟೇರ್‌ಗೆ ಪರಿಹಾರ ಕಟ್ಟಿಕೊಡಬೇಕು. 620 ಕೋಟಿ ಹಾಲಿನ ಪ್ರೋತ್ಸಾಹ ದರ ಬಾಕಿ ಇದೆ. ಈ ಕೂಡಲೇ ಆ ಹಣವನ್ನೂ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ, ತುಂಗಭದ್ರಾ ಕೊಳ್ಳದ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಪ್ರತಿಭಟನೆ ನಡೆಸುತ್ತೇವೆ. ಸದನದಲ್ಲೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮುಖಂಡರಾದ
ಎಸ್. ಗುರುಲಿಂಗನಗೌಡ, ಕೆ.ಎ. ರಾಮಲಿಂಗಪ್ಪ, ಎಚ್. ಹನುಮಂತಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಕೆ.ಎಸ್. ದಿವಾಕರ, ಡಾ. ಮಹಿಪಾಲ್, ಅಡವಿಸ್ವಾಮಿ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು, ವಿವಿಧ ಮೊರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎರಡನೇ ಬೆಳೆಗೆ ನೀರು ಕೊಡಲೇಬೇಕು’ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗಡಗಿ ಚೆನ್ನಪ್ಪ ವೃತ್ತದಲ್ಲಿನ ಬಿಜೆಪಿ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಯಿತು. ಹೀಗಾಗಿ ಪಕ್ಷದ ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.