ಶಾಸಕ ಎಚ್.ಕೆ.ಸುರೇಶ್ ನೇತೃತ್ವ । ಗ್ಯಾರಂಟಿಗಳ ನಷ್ಟ ಸರಿದೂಗಿಸಲು ಇಂಧನ ಬೆಲೆ ಏರಿಕೆ ಆರೋಪ । ರಾಜ್ಯದ ಜನರ ಜೇಬಿಗೆ ಕನ್ನ
ಪುಕ್ಕಟೆ ಭಾಗ್ಯಗಳನ್ನು ಜನರಿಗೆ ತಲುಪಿಸಲು ಸರ್ಕಾರದ ಬೊಕ್ಕಸ ಖಾಲಿಯಾಗಿ ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ದಿಢೀರನೆ ಇಂಧನ ಬೆಲೆ ಏರಿಸಿ ರಾಜ್ಯದ ಜನತೆಯ ಜೇಬಿಗೆ ಕಾಂಗ್ರೆಸ್ ಸರ್ಕಾರ ಕನ್ನ ಹಾಕುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ನೆಹರು ನಗರದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಗುರುವಾರ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಮಾತನಾಡಿ, ಪುಕ್ಕಟೆ ಭಾಗ್ಯಗಳನ್ನು ಜನರಿಗೆ ತಲುಪಿಸಲು ಆರ್ಥಿಕ ಸಮಸ್ಯೆ ಇರುವುದರಿಂದ ದಿಢೀರ್ ಇಂಧನ ಬೆಲೆ ಏರಿಸಿ ರಾಜ್ಯದ ಜನತೆಗೆ ಬರೆ ಎಳೆದಿದ್ದಾರೆ. ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ಆಶ್ವಾಸನೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗದೆ ತೈಲ ಬೆಲೆ ಏರಿಸಿದ್ದಾರೆ, ರಾಜ್ಯದಲ್ಲಿ ಭ್ರಷ್ಟ ಸರ್ಕಾರವೆಂದರೆ ಅದು ಸಿದ್ದರಾಮಯ್ಯ ಸರ್ಕಾರ, ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ, ಅದ ಕಾರಣ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ದಾಟಲು ಸಾಧ್ಯವಾಗಿಲ್ಲ, ಅವರದೇ ಸರ್ಕಾರ ಇದ್ದರೂ, 135 ಶಾಸಕರನ್ನು ಹೊಂದಿದ್ದರೂ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.ರಾಜ್ಯದ ಜನತೆ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ, ಜನರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡಬೇಕಾದ ಪ್ರತಿನಿಧಿಗಳು ಜನರಿಗೆ ಸಮಸ್ಯೆಯಾಗಿದ್ದಾರೆ. ತೈಲ ಬೆಲೆಯನ್ನು ತಕ್ಷಣ ಇಳಿಸಬೇಕು, ಇಲ್ಲದಿದ್ದಲ್ಲಿ ಹೋರಾಟವನ್ನು ಬೇರೆ ಸ್ವರೂಪಕ್ಕೆ ಕೊಂಡೊಯ್ಯಬೇಕಾಗುತ್ತದೆ ಎಂದು ಎಚ್ಚರಿಸಿದರು,
ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ಕಾಲಹರಣ ಮಾಡುತ್ತಿದೆ, ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ದೈನಂದಿನ ವಸ್ತುಗಳ ಬೆಲೆ ಗಗನಕ್ಕೆರಿರುವಾಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿರುವುದು ಸರಿಯಲ್ಲ, ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದರು,
ಪ್ರತಿಭಟನೆ ನಂತರ ಬಿಜೆಪಿ ಸದಸ್ಯರು ತಾಲೂಕು ದಂಡಧಿಕಾರಿಗಳಿಗೆ ಮನವಿ ಪತ್ರ ನೀಡಿದರು,ಪ್ರತಿಭಟನೆಯಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಪರ್ವತಯ್ಯ, ರೇಣುಕುಮಾರ್, ಮಹಿಳಾ ತಾಲೂಕು ಅಧ್ಯಕ್ಷೆ ಶೋಭಾ ಗಣೇಶ್, ಮುಖಂಡರಾದ ಜಿ.ಕೆ.ಕುಮಾರ್, ಅಭಿಗೌಡ, ಶಿವಣ್ಣ, ಸಂಗಪ್ಪ, ತಾಲೂಕು ಯೂತ್ ಅಧ್ಯಕ್ಷ ವಿನಯ್, ತೀರ್ಥಂಕರ್, ಕೇಬಲ್ ರಾಜಣ್ಣ, ಉಮೇಶ್, ಶ್ರೇಯಸ್ ಇದ್ದರು. ಅರಕಲಗೂಡಿನಲ್ಲಿ ಬಿಜೆಪಿ ಧರಣಿ
ಅರಕಲಗೂಡು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕ ಗುರುವಾರ ಪ್ರತಿಭಟನೆ ನಡೆಸಿತು.ಪಟ್ಟಣದ ಅನಕೃ ವೃತ್ತ ಬಳಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ತೈಲಗಳ ಬೆಲೆ ಏರಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.ಖಂಡೇಶ್ವರ್ ಮಾತನಾಡಿ, ಜನಸಾಮಾನ್ಯರು ತಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸುವ ವಸ್ತುಗಳಲ್ಲಿ ಪೆಟ್ರೋಲ್, ಡಿಸೇಲ್ ತೈಲಗಳು ಒಂದಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ದಿಢೀರ್ ಬೆಲೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ, ತಕ್ಷಣವೇ ಬೆಲೆ ಏರಿಕೆಯ ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಮಂಡಲ ಸಂಚಾಲಕ ಲೋಕೇಶ್ ಹೊಂಡರವಳ್ಳಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಲೋಕೇಶ್, ತಾಪಂ ಮಾಜಿ ಅಧ್ಯಕ್ಷ ಮದೇಶ್, ಮಾಜಿ ಮಂಡಲ ಅಧ್ಯಕ್ಷ ಕೇಶವೇಗೌಡ, ವಿಶ್ವನಾಥ, ಯುವ ಮೊರ್ಚಾ ಅಧ್ಯಕ್ಷ ಚಂದ್ರಶೇಖರ, ಪುನೀತ್ ಮಾದೇವಪ್ಪ, ಪರಮೇಶ, ವರುಣ, ದರ್ಶನ ಇತರರಿದ್ದರು.