ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿತರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯ ಹೈಕೋರ್ಟಿನ ತೀರ್ಪನ್ನು ಗೌರವಿಸಿ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ. ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಹೈಕೋರ್ಟ್ ತಿಳಿಸಿದೆ. ಹೈಕೋರ್ಟ್‌ನಲ್ಲಿ ಸುದೀರ್ಘವಾದ, ಪ್ರತಿವಾದದ ಬಳಿಕ ಈ ತೀರ್ಪು ಹೊರಬಿದ್ದಿದೆ. ಗೌರವಾನ್ವಿತ ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ಮುಖ್ಯಮಂತ್ರಿ ಅದರ ವಿರುದ್ಧ ನ್ಯಾಯಾಲದಲ್ಲಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ರಾಜ್ಯಪಾಲರ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿರುವುದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿದೇವು. ನಂತರ ಸ್ವತಃ ಸಿಎಂ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡು ಬೆಂಗಳೂರು- ಮೈಸೂರು ಪಾದಯಾತ್ರೆಯನ್ನು ನಡೆಸಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಯಶಸ್ವಿ ಹೋರಾಟ ಮಾಡಿದ್ದಾಗಿ ವಿವರಿಸಿದರು. ರಾಜ್ಯದ ಮೂಲೆಮೂಲೆಯಿಂದ ಲಕ್ಷ ಲಕ್ಷ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು ಎಂದರು.ನಗರಸಭಾ ಅಧ್ಯಕ್ಷ ಎಸ್.ಸುರೇಶ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಮಾಜಿ ಆರ್.ಸುಂದರ್, ಮಾಜಿ ಚೂಡಾಧ್ಯಕ್ಷ ಕುಲಗಾಣಶಾಂತಮೂರ್ತಿ, ಬಾಲಸುಬ್ರಹ್ಮಣ್ಯ, ನಗರಮಂಡಲ ಅಧ್ಯಕ್ಷ ಶಿವರಾಜು, ಪ್ರಧಾನ ಕಾರ್ಯದರ್ಶಿಗಳಾದ ಕೂಸಣ್ಣ, ಮಹೇಶ್, ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವು, ಪ್ರಧಾನ ಹೊನ್ನೂರು ಮಹದೇವಸ್ವಾಮಿ, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಮೂಡಳ್ಳಿಮೂರ್ತಿ, ಎಸ್.ಟಿ ಮೋರ್ಚಾ ಉಪಾಧ್ಯಕ್ಷ ಬುಲೆಟ್ ಚಂದ್ರು, ಆನಂದ್‌ಭಗೀರಥ್, ಪುನೀತ್, ರಾಜೇಂದ್ರ, ಚಂದ್ರಶೇಖರ್, ಗುರು ಸೋಮವಾರಪೇಟೆ,ಗಿರಿ, ಶಿವು, ವಿರೇಂದ್ರ, ಮುತ್ತಿಗೆಮೂರ್ತಿ, ರಂಗಸ್ವಾಮಿ, ಪ್ರವೀಣ್, ಸುಮಂತ್, ಬಲವೀರ್‌ಸಿಂಗ್, ರುದ್ರ, ಭಾಸ್ಕರ್ ಇತರರು ಭಾಗವಹಿಸಿದ್ದರು.