ಕನ್ನಡಪ್ರಭ ವಾರ್ತೆ ಬೆಂಗಳೂರು
ಜೆಡಿಎಸ್-ಬಿಜೆಪಿಯ ಪಿತೂರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಯಾವುದೇ ತನಿಖೆಗೆ ನಾನು ಎದೆಗುಂದುವುದಿಲ್ಲ. ಕೋರ್ಟ್ ಆದೇಶದ ಬಗ್ಗೆ ಕಾನೂನು ತಜ್ಞರು, ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಜತೆ ಚರ್ಚಿಸಿ ಮುಂದಿನ ಕಾನೂನು ಹಾಗೂ ರಾಜಕೀಯ ಹೋರಾಟ ಮಾಡುತ್ತೇವೆ. ಈ ಹೋರಾಟದಲ್ಲಿ ಸತ್ಯಕ್ಕೆ ಅಂತಿಮ ಜಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಮುಡಾ ಪ್ರಕರಣ ಕುರಿತು ಹೈಕೋರ್ಟ್ ಆದೇಶದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ಬಂಡೆಯಂತೆ ನಿಂತಿದ್ದು, ಹೋರಾಟ ಮುಂದುವರೆಸಲು ಉತ್ತೇಜನ ನೀಡಿದ್ದಾರೆ ಎಂದು ಹೇಳಿದರು.ಸರ್ಕಾರ ಅಲುಗಾಡಿಸಲು ಷಡ್ಯಂತ್ರ:ದೇಶಾದ್ಯಂತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಸರ್ಕಾರದ ಮೇಲೆ ಸೇಡಿನ ರಾಜಕೀಯ ಮಾಡುತ್ತಿದೆ. ನಮ್ಮಲ್ಲೂ 136 ಶಾಸಕರ ಬೆಂಬಲದೊಂದಿಗೆ ರಚಿಸಿರುವ ಸರ್ಕಾರ ಅಸ್ಥಿರಗೊಳಿಸಲು ಆಪರೇಷನ್ ಕಮಲಕ್ಕೆ ಯತ್ನಿಸಿದರು. ಆದರೆ ನಮ್ಮ ಶಾಸಕರು ಸಂಚಿಗೆ ಬಲಿಯಾಗಲಿಲ್ಲ. ಹೀಗಾಗಿ ಮುಡಾ ಹೆಸರಿನಲ್ಲಿ ರಾಜ್ಯದಲ್ಲೂ ಸರ್ಕಾರ ಅಲುಗಾಡಿಸಲು, ಕಪ್ಪು ಮಸಿ ಬಳಿಯಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೇರಿಕೊಂಡು ರಾಜಭವನವನ್ನು ದುರುಪಯೋಗ ಮಾಡಿಕೊಂಡು ಷಡ್ಯಂತ್ರದ ಮೂಲಕ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ನಿಲ್ಲಿಸುವುದು ಉದ್ದೇಶ:ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ. ಬಿಜೆಪಿ-ಜೆಡಿಎಸ್‌ಗೆ ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪ ಮಾಡಿ ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ಬಡವರ ಪರ ಯೋಜನೆಗಳನ್ನು ವಿರೋಧಿಸಿದ್ದರು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
------