ಹಿರೇಕೆರೂರು: ೧೨ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಯಾಯಿ ಸಿರಿಗೆರೆಯ ಮಹಾಸಂತರಾದ ಪೂಜ್ಯರು ಸಾಧನೆಯ ಶಿಖರದ ಮೇಲೆ ಮೆರೆಯುವ ಘಟನೆಗಳನ್ನು ಮೆಲುಕು ಹಾಕುವುದಕ್ಕಿಂತ ಸಾಧನೆಯ ಪೂರ್ವದಲ್ಲಿ ಎದುರಿಸಿದ ಸಮಸ್ಯೆಗಳನ್ನು ನೆನಪಿಸಿಕೊಂಡರೆ ಅವು ಬದುಕಿಗೆ ನಿಜವಾದ ಫಲ ಕೊಡುತ್ತವೆ ಎಂಬ ಸತ್ಯವನ್ನು ಚೆನ್ನಾಗಿ ತಿಳಿದಿದ್ದರು. ಲಿಂ. ಶಿವಕುಮಾರ ಮಹಾಸ್ವಾಮಿಗಳು ಈ ಭಾರತ ಕಂಡ ಆಧ್ಯಾತ್ಮಿಕ ಮಹಾ ಗುರುಗಳು ಎಂದು ಜೆ.ಬಿ. ತಂಬಾಕದ ಹೇಳಿದರು.ಪಟ್ಟಣದ ಸಿ.ಇ.ಎಸ್. ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೩೨ನೇ ವರ್ಷದ ಪುಣ್ಯಸ್ಮರಣೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಅನ್ನ, ಅಕ್ಷರ ಮತ್ತು ಜ್ಞಾನ ಇವುಗಳನ್ನು ಈ ನಾಡಿಗೆ ನಿರಂತರವಾಗಿ ನೀಡುತ್ತಾ, ದಾಸೋಹ ನೆರವೇರಿಸಿಕೊಂಡು ಕಾಯಕವೇ ಕೈಲಾಸವೆಂದು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಿ ಜ್ಞಾನವನ್ನು ಧಾರೆ ಎರೆದ ಈ ಮಹಾಸ್ವಾಮಿಗಳು ಯಾವುದೇ ಜಾತಿ, ಮತ, ಪಂಥಗಳಿಲ್ಲದೆ ಎಲ್ಲವನ್ನು ಮಾನವೀಯತೆ ದೃಷ್ಟಿಯಿಂದ ನೋಡಿದರು. ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟ ಇಂತಹ ಕಾಯಕ ಯೋಗಿಯನ್ನು ಇಂದು ನಾವು ನೆನೆಯುವುದೇ ಪುಣ್ಯಕರ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳ, ದೀನ-ದಲಿತರ ಹಸಿವು ನೀಗಿಸಿದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಸಮಾಜದ ಏಳ್ಗೆಗಾಗಿ ವೈಚಾರಿಕ ಪರಂಪರೆಗೆ ನಾಂದಿ ಹಾಡಿ ಬಸವಾದಿ ಶರಣರು ಕಟ್ಟ ಬಯಸಿದ ಸಮಾಜವನ್ನು ಕಟ್ಟಲು ಕಂಕಣಬದ್ದರಾದರು. ಅನ್ನ, ಆಧ್ಯಾತ್ಮ, ಜ್ಞಾನವೆಂಬ ತ್ರಿವಿಧ ದಾಸೋಹದಿಂದ ಜಗತ್ತಿಗೆ ದಾರಿದೀಪ ಆಗಿದ್ದಾರೆ. ಅಂತಹ ಮಹಾತ್ಮರ ಶ್ರೀರಕ್ಷೆ ನಮ್ಮೆಲ್ಲರ ಮೇಲೆ ಇರಲಿ ಎಂಬುದೇ ನಮ್ಮಆಶಯ ಎಂದರು.ಸಮಾರಂಭದಲ್ಲಿ ಸಮಾಜದ ಮುಖಂಡರಾದ ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಸಿದ್ದನಗೌಡ ನರೇಗೌಡ್ರ, ಯು.ಎಸ್. ಕಳಗೊಂಡದ, ಮಹೇಶಣ್ಣ ಗುಬ್ಬಿ, ಮಹೆಂದ್ರ ಬಡಳ್ಳಿ, ಆರ್.ಎಸ್. ಪಾಟೀಲ್, ಎಸ್. ವೀರಭದ್ರಯ್ಯ. ಶೇಖಣ್ಣ ಹೊಂಡದ, ಮಂಜುಳಾ ಬಾಳಿಕಾಯಿ, ಜೆ.ವಿ. ಸನ್ನೇರ, ಸಿದ್ದನಗೌಡ ಚನ್ನಗೌಡ್ರ ಭಕ್ತರು ಪಾಲ್ಗೊಂಡಿದ್ದರು. ಪ್ರಾಂಶುಪಾಲರಾದ ಡಾ.ಎಸ್.ಬಿ. ಚನ್ನಗೌಡ್ರ ಸ್ವಾಗತಿಸಿದರು. ಆರ್.ಎಂ. ಕರೇಗೌಡ್ರ ನಿರೂಪಿಸಿ, ಪಿ.ಎಂ. ಡಮ್ಮಳ್ಳಿ ವಂದಿಸಿದರು.