ಒಂದು ಎಕರೆ ಬಾಳೆ ಬೆಳೆ ಬೆಳೆಯಲು ರೈತರು ಲಕ್ಷಾಂತರ ರುಪಾಯಿ ಸಾಲ ಮಾಡಿ ಹೂಡಿಕೆ ಮಾಡಿದ್ದರೂ, ಅಕಾಲಿಕ ಮಳೆ ಮತ್ತು ಗಾಳಿಯಿಂದ ಸಂಪೂರ್ಣ ಹಾನಿಗೊಳಗಾಗಿದೆ
ಕೊಪ್ಪಳ: ಇತ್ತೀಚೆಗೆ ಸುರಿದ ಭಾರಿ ಮಳೆ, ಗಾಳಿಯಿಂದಾಗಿ ಹಾಳಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಇಲೆಕ್ಟ್ರಿಕ್ ವಾಹನ ಮತ್ತು ಸೈಕಲ್‌ನಲ್ಲಿ ಜಾಥಾ ನಡೆಸಿ, ಇಂಧನ ಉಳಿಸಿ ಜಾಗೃತಿ ಮೂಡಿಸಿದರು.
ಕೊಪ್ಪಳ ಬಿಜೆಪಿ ಗ್ರಾಮೀಣ ಮಂಡಲ ವತಿಯಿಂದ ಗುರುವಾರ ನಗರದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ, ಗಮನ ಸೆಳೆಯಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬಳಕೆ, ಪೆಟ್ರೋಲ್-ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಗತ್ಯತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಜೆಪಿ ನಾಯಕರು ಪ್ರತಿಭಟನೆ ವೇಳೆ ಸೈಕಲ್ ಹಾಗೂ ಎಲೆಕ್ಟ್ರಿಕಲ್ ಬೈಕ್ ಬಳಸಿದರು.
ನಗರದ ಅಶೋಕ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಅಲ್ಲಿಂದ ಡಿಸಿ ಕಚೇರಿ ವರೆಗೆ ಸೈಕಲ್ ಹಾಗೂ ಎಲೆಕ್ಟ್ರಿಕ್ ಬೈಕ್ ಮುಖಾಂತರ ಡಿಸಿ ಕಚೇರಿ ವರೆಗೆ ಸಾಗಿದರು. ಆನಂತರ ರೈತರೊಂದಿಗೆ ಬಿಜೆಪಿ ನಾಯಕರು, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಸವರಾಜ ಕ್ಯಾವಟರ್ ಇನ್ನಿತರ ನಾಯಕರನ್ನು ಪೊಲೀಸರು ತಡೆದರು. ಬಳಿಕ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಧರಣಿ ಕುಳಿತ ಬಿಜೆಪಿ ನಾಯಕರು, ಸರ್ಕಾರದ ವಿಳಂಬ ಧೋರಣೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಘೋಷಣೆ ಕೂಗಿದರು. ಕೊನೆಗೆ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಪ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಒಂದು ಎಕರೆ ಬಾಳೆ ಬೆಳೆ ಬೆಳೆಯಲು ರೈತರು ಲಕ್ಷಾಂತರ ರುಪಾಯಿ ಸಾಲ ಮಾಡಿ ಹೂಡಿಕೆ ಮಾಡಿದ್ದರೂ, ಅಕಾಲಿಕ ಮಳೆ ಮತ್ತು ಗಾಳಿಯಿಂದ ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದ ರೈತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಬದುಕಿನ ಮೇಲೆಯೇ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಕ್ಷಣವೇ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಬಸವರಾಜ ಕ್ಯಾವಟರ್ ಮಾತನಾಡಿ, ರಾಜ್ಯದಲ್ಲಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲಿಯೂ ಕೊಪ್ಪಳ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಗೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಸಾಲ-ಸೋಲ ಮಾಡಿ, ಬಾಳೆ, ಎಲೆ ಸೇರಿ ವಿವಿಧ ಬೆಳೆ ಬೆಳೆದಿದ್ದ ರೈತರ ಪರಿಸ್ಥಿತಿ ಕಷ್ಟ ನೋಡಲಾಗುತ್ತಿಲ್ಲ ಎಂದರು.
ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ ಸಜ್ಜನ್, ಚಂದ್ರಶೇಖರ ಪಾಟೀಲ್ ಹಲಗೇರಿ, ಮಹಾಂತೇಶ ಪಾಟೀಲ್ ಮೈನಳ್ಳಿ, ಫಕೀರಪ್ಪ ಆರೇರ್, ಗಣೇಶ ಹೋರಟತ್ನಾಳ, ಪ್ರದೀಪ್ ಹಿಟ್ನಾಳ್, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅಶೋಕ್ ಗುಳದಳ್ಳಿ, ತಾಲೂಕು ಅಧ್ಯಕ್ಷ ವೀರೇಶ್ ಕಸನಖಂಡಿ, ಜಿಲ್ಲಾ ಕಾರ್ಯದರ್ಶಿ ಸುನಿಲ್ ಹೆಸರೂರ್, ಪ್ರಭುಗೌಡ ಪಾಟೀಲ್, ಮಹೇಶ್ ಅಂಗಡಿ, ಅಂದಪ್ಪ ಯಲ್ಲಮ್ಮನವರ, ಗುರಪ್ಪ ಗೋಡೆಕಾರ್, ಮಹಿಳಾ ನಗರ ಘಟಕದ ಅಧ್ಯಕ್ಷೆ ಜಯಶ್ರೀ ಆರೇರ್, ಗ್ರಾಮೀಣ ಮಂಡಲ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧಾ ಬಿಸನಳ್ಳಿ, ಬಸವರೆಡ್ಡಿ ಬೈರಾಪುರ್, ರಾಜು ಬಾಕ್ಲೆ, ಗವಿರಾಜ್ ಗೊರವರ, ರಮೇಶ್ ಕವಲೂರು, ದೇವಪ್ಪ ಹ್ಯಾಟಿ, ಚನ್ನಬಸವ ಗಾಳಿ, ದೇವರಾಜ್ ಹಲಸಮುದ್ರ, ಮಹಾಲಕ್ಷ್ಮಿ ಕಂದಾರಿ, ಉಮೇಶ್ ಕುದ್ರೇಕರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶೋಭಾ ನಗರಿ, ಮಾರುತಿ ಹಡಪದ, ನೀಲಕಂಠಯ್ಯ ಹಿರೇಮಠ, ದೀಪಕ ಹಿರೇಮಠ, ನಾಗರಾಜ ದೊಡ್ಡಮನಿ, ವಿಜಯಪಾಟೀಲ್ ಹಲಗೇರಿ, ಶರಣಯ್ಯ ಮುಂದರಗಿಮಠ, ಶರಣಪ್ಪ ಮಡಿವಾಳರ, ಚಂದ್ರು ಗೋಸಿ, ರಮೇಶ್ ಕರಡಿ, ಖಜಾ ಹುಸೇನ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.