ಹೊಸಪೇಟೆ ಇಸ್ಪಾತ್ ಕಾರ್ಖಾನೆ ಕಾರ್ಯ ನಿರ್ವಹಿಸದೇ ವರ್ಷವೇ ಆಗಿತ್ತು
ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಸ್ಪಾಂಜ್ ಐರಾನ್ ಉತ್ಪಾದಿಸುವ ಎರಡು ಬೃಹತ್ ಕಾರ್ಖಾನೆಗಳಿಗೆ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ನೇತೃತ್ವದ ತಂಡ ಗುರುವಾರ ಬೀಗ ಜಡಿದು ಸೀಲ್ ಮಾಡಲಾಗಿದ್ದು, ಕಾರ್ಖಾನೆ ತೊಲಗಿಸಿ ಹೋರಾಟಕ್ಕೆ ಮೊದಲ ಜಯ ದೊರೆಕಿದಂತಾಗಿದೆ.
ನೂರಾರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದ ಪಿಬಿಎಸ್ ಕಾರ್ಖಾನೆಯ ಸ್ಪಾಂಜ್ ಐರಾನ್ ಕಾರ್ಖಾನೆಗೆ ಕೊಪ್ಪಳ ಉಪವಿಭಾಗಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಪೊಲೀಸ್ ಇಲಾಖೆಯ ಅಧಿಕಾರಿ, ವಿದ್ಯುತ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳ ತಂಡ ಭೇಟಿ ನೀಡಿ, ಆ ಎಲ್ಲ ಕಾರ್ಮಿಕರನ್ನು ಹೊರಗೆ ಕಳುಹಿಸಿ ಬೀಗ ಹಾಕಿ ಸೀಜ್ ಮಾಡಿದ್ದಾರೆ.
ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಕಣ್ಣೀರು ಹಾಕುತ್ತಾ ಹೊರ ಬಂದರೆ ಅಧಿಕಾರಿಗಳು ಯಾಕೆ ಸರ್ ಎನ್ನುತ್ತಿರುವಾಗಲೇ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೊರಡಿಸಿದ್ದ ಬಂದ್ ಆದೇಶ ತೋರಿಸಿ, ಗೇಟ್ ಬಂದ್ ಮಾಡಿ ಬೀಗ ಹಾಕಲಾಯಿತು.
ಹೊಸಪೇಟೆ ಇಸ್ಪಾತ್ ಕಾರ್ಖಾನೆ ಕಾರ್ಯ ನಿರ್ವಹಿಸದೇ ವರ್ಷವೇ ಆಗಿತ್ತು. ಆದರೂ ಒಂದಷ್ಟು ಕಾರ್ಮಿಕರು, ಅಧಿಕಾರಿಗಳು ಇದ್ದರು. ಅವರನ್ನು ಆಚೆ ಕಳುಹಿಸಿ ಅದಕ್ಕೂ ದೊಡ್ಡದೊಂದು ಬೀಗ ಹಾಕಿ, ಸೀಜ್ ಮಾಡಲಾಯಿತು.
ವರದಿಯನ್ನಾಧರಿಸಿ ಕ್ರಮ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯ ಕಳೆದ 6 ತಿಂಗಳ ಹಿಂದೆ ಭೇಟಿ ನೀಡಿ ಕೊಪ್ಪಳ ಬಳಿ ಇರುವ ಕಾರ್ಖಾನೆಗಳ ಕುರಿತು ಪರಿಶೀಲನೆ ಮಾಡಿ ಅವುಗಳಿಂದ ಆಗುತ್ತಿರುವ ಮಾಲಿನ್ಯ ಮತ್ತು ಕಾರ್ಖಾನೆ ಅನುಸರಿಸಬೇಕಾದ ಕ್ರಮ ಅನುಸರಿಸದೇ ಇರುವ ಕುರಿತು ವರದಿ ಸಲ್ಲಿಸಿದ್ದರು. ಇದಾದ ಮೇಲೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಸಹ ಭೇಟಿ ನೀಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಪ್ರತ್ಯೇಕ ಅಧ್ಯಯನ ನಡೆಸಿ ನೋಟಿಸ್ ಜಾರಿ ಮಾಡಿದ್ದರು.
ಇದೆಲ್ಲವನ್ನು ಆಧರಿಸಿ ಐದು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲಾಯಿತು. ಇದರ ಮುಂದುವರೆದ ಭಾಗವಾಗಿ ಈಗ ಹೊಸಪೇಟೆ ಇಸ್ಪಾತ್ ಮತ್ತು ಪಿಬಿಎಸ್ ಎನ್ನುವ ಎರಡು ಬೃಹತ್ ಕಾರ್ಖಾನೆಗಳಿಗೆ ಬೀಗ್ ಜಡಿದು ಸೀಜ್ ಮಾಡಲಾಗಿದೆ.
ಹೋರಾಟಕ್ಕೆ ಜಯ: ಕೊಪ್ಪಳ ಬಳಿ ಈಗಾಗಲೇ ಇರುವ ಕಾರ್ಖಾನೆಗಳಿಂದಾಗುವ ಮಾಲಿನ್ಯ ನಿಯಂತ್ರಣ ಮಾಡಿ ಮತ್ತು ಹೊಸದಾಗಿ ಯಾವುದೇ ಕಾರ್ಖಾನೆ ಪ್ರಾರಂಭಿಸದಂತೆ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅಷ್ಟೇ ಅಲ್ಲ, ಜನಪ್ರತಿನಿಧಿಗಳಿಗೆ ಈ ಜವಾಬ್ದಾರಿ ನಿಮ್ಮದು ಎಂದು ತಾಕೀತು ಮಾಡಿದ್ದರು. ಇದಾದ ಮೇಲೆ ಎಲ್ಲ ಜನಪ್ರತಿನಿಧಿಗಳು ಬೆಂಗಳೂರಿಗೆ ನಿಯೋಗದಲ್ಲಿ ತೆರಳಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಆಗ ಹೊಸದಾಗಿ ಪ್ರಾರಂಭವಾಗುತ್ತಿದ್ದ ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪನೆ ಸ್ಥಗಿತಗೊಳಿಸಲು ಸಿಎಂ ಮೌಖಿಕ ಆದೇಶ ನೀಡಿದ್ದರು.
ಆಗಲೇ ಕಾರ್ಖಾನೆಗಳಿಂದಾಗುವ ಮಾಲಿನ್ಯ ತಡೆಗಟ್ಟುವಂತೆ ಹಾಗೂ ಬಿಎಸ್ ಪಿಎಲ್ ಕಾರ್ಖಾನೆ ತೊಲಗಿಸುವಂತೆ ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಬಂದ್ ನಡೆಸಿತ್ತಲ್ಲದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕಳೆದ 200 ದಿನಗಳಿಂದ ನಿರಂತರವಾಗಿ ನಡೆಸಿದ್ದು, ಅದು ಈಗಲೂ ಮುಂದುವರೆದಿದೆ. ಈ ನಡುವೆ ಕೊಪ್ಪಳ ಜಿಲ್ಲಾಡಳಿತ ಎರಡು ಬೃಹತ್ ಕಾರ್ಖಾನೆಗಳಿಗೆ ಬೀಗ ಜಡಿದಿರುವುದು ಹೋರಾಟಕ್ಕೆ ಮೊದಲ ಜಯ ಸಿಕ್ಕಂತೆ ಆಗಿದೆ.
ಹೋರಾಟಕ್ಕೆ ಮೊದಲ ಜಯ ಸಿಕ್ಕಂತೆ ಆಗಿದೆ. ಆದರೆ, ಇದು ಕಣ್ಣೊರೆಸುವ ತಂತ್ರವಾಗಬಾರದು. ಕೊಪ್ಪಳ ತಾಲೂಕಿನಾದ್ಯಂತ ಇರುವ ಅಷ್ಟೂ ಕಾರ್ಖಾನೆಗಳನ್ನು ದೂರ ಎಲ್ಲಿಯಾದರೂ ಸ್ಥಳಾಂತರ ಮಾಡಿ, ನಮಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ನೀಡಬೇಕು ಎಂದು ಹಿರೇಬಗನಾಳ ಗ್ರಾಮಸ್ಥ ಮಹೇಶ ವದಗನಾಳ ತಿಳಿಸಿದ್ದಾರೆ.
ಕೇವಲ ಎರಡು ಕಾರ್ಖಾನೆಗಳಿಗೆ ಬೀಗ ಹಾಕಿದಾಕ್ಷಣ ನಾವು ಸಂತೃಪ್ತರಾಗುವ ಪ್ರಶ್ನೆಯೇ ಇಲ್ಲ. ಇದೊಂದು ಪ್ರಾರಂಭಿಕ ಜಯ ಅಷ್ಟೇ ನೋಟಿಸ್ ಜಾರಿ ಮಾಡಿರುವ ಅಷ್ಟೂ ಕಾರ್ಖಾನೆಗಳು ಬಂದ್ ಆಗಬೇಕು ಮತ್ತು ಹೊಸದಾಗಿ ಯಾವುದೇ ಕಾರ್ಖಾನೆ ತೆರೆಯದಂತೆ ಆದೇಶವಾಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಜಂಟಿ ಕ್ರೀಯಾ ಸಮಿತಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.