ಕನ್ನಡಪ್ರಭ ವಾರ್ತೆ ಮೂಲ್ಕಿ
ದೇಶದ ರಕ್ಷಣೆಗೆ ಒತ್ತು ಕೊಡುವ ಸಂಸ್ಥೆಯು ಸುರತ್ಕಲ್ ನಲ್ಲಿ ಆರಂಭವಾಗಿರುವುದು ನಮಗೆ ಹೆಮ್ಮೆ ತರುವಂತಹುದು. ಭವಿಷ್ಯದ ದೃಷ್ಟಿಯಿಂದ ಇಂತಹ ಸಂಸ್ಥೆಗಳ ಕೊಡುಗೆ ಅಗತ್ಯ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.ಸುರತ್ಕಲ್ ನ ಎನ್ ಐಟಿಕೆಯ ಸ್ತೆಫ್‌ನಲ್ಲಿ ಆರಂಭಗೊಂಡ ಕರಾವಳಿ ಕರ್ನಾಟಕದ ಕೈಗಾರಿಕಾ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಲಿರುವ ಬೀವಿಂಗ್ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿವಿಂಗ್ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕೃಷಿ, ಕೈಗಾರಿಕೆ, ಭದ್ರತೆ, ಸರ್ವೆ, ವಿಪತ್ತು ನಿರ್ವಹಣೆ ಹಾಗೂ ಉತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ಡ್ರೋಣ್ ಉತ್ಪನ್ನ ಹಾಗೂ ಸೇವೆಯ ಗುರಿಯನ್ನು ಹೊಂದಿದ್ದು, ನುರಿತ ಸಶಕ್ತ ಹಾಗೂ ಪಳಗಿದ ತಂಡವನ್ನು ಹೊಂದಿದೆ. ದೇಶದ ಭದ್ರತೆ ಹಾಗೂ ರಕ್ಷಣೆಯೇ ನಮ್ಮ ಮೊದಲ ಆದ್ಯತೆ ಎಂದು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸುನಿಲ್ ಎಲ್. ಪ್ರಭು ಹೇಳಿದರು.ಈ ಸಂದರ್ಭ ಎನ್ ಐಟಿಕೆಯ ಡೆಪ್ಯುಟಿ ಡೈರೆಕ್ತರ್ ಸುಭಾಷ್ ಸಿ. ಎರಗಲ್, ಎನ್ ಐಟಿಕೆ ಸ್ತೆಪ್ ನ ಡೈರೆಕ್ಟರ್ ಇನ್ ಚಾರ್ಜ್ ಸುಬ್ರಾಯ ಹೆಗ್ಡೆ ಅವರು ತಂತ್ರಜ್ಞಾನ ಹಾಗೂ ಕೌಶಲ್ಯತೆಯನ್ನು ದೇಶದ ರಕ್ಷಣೆಗೆ ಬಳಸಲಿರುವ ತಂಡದ ಸದಸ್ಯರಿಗೆ ಶುಭ ಹಾರೈಸಿದರು.
ನಿಕಟ ಪೂರ್ವ ಮನಪಾ ಸದಸ್ಯರಾದ ಶೋಭಾ ರಾಜೇಶ್, ಲೋಕೇಶ್ ಬೊಳ್ಳಾಜೆ, ಸದಸ್ಯೆ ಹಾಗೂ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ ಉಪಸ್ಥಿತರಿದ್ದರು.