ವಕ್ಫ್‌ ಮುಷ್ಟಿಯಿಂದ ಭೂಮಿ ರಕ್ಷಿಸಲು ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Nov 23, 2024 12:31 AM

ಸಾರಾಂಶ

ಇಡೀ ರಾಜ್ಯಾದ್ಯಂತ ವಕ್ಫ್ ಕಾಯಿದೆ ವಿರುದ್ಧ ಜನಸಾಮಾನ್ಯರಿಗೆ ಮುಟ್ಟುವ ರೀತಿಯಲ್ಲಿ ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರ ಏನಿದೆ ಅದನ್ನು ವಿರೋಧಿಸುತ್ತಿದ್ದೇವೆ. "ನಮ್ಮ ಭೂಮಿ ನಮ್ಮ ಹಕ್ಕು " ಶೀರ್ಷಿಕೆಯಡಿ ಜನಜಾಗೃತಿ ಆಂದೋಲನವನ್ನು ಏರ್ಪಡಿಸಲಾಗಿದೆ. ನಮ್ಮ ಭೂಮಿಯನ್ನು ವಕ್ಫ್ ಕಾಯ್ದೆಯಿಂದ ರಕ್ಷಿಸೋಣ, ನಮ್ಮ ಹಕ್ಕಿಗಾಗಿ ಸಂಘಟಿತ ಹೋರಾಟ ಮಾಡೋಣ ಎನ್ನುವ ಘೋಷಣೆಯೊಂದಿಗೆ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಒಂದು ದಿನದ ಹೋರಾಟ ಮಾಡಿ ಸಂಜೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

"ನಮ್ಮ ಭೂಮಿಯನ್ನು ವಕ್ಫ್ ಕಾಯ್ದೆಯಿಂದ ರಕ್ಷಿಸೋಣ, ನಮ್ಮ ಹಕ್ಕಿಗಾಗಿ ಸಂಘಟಿತ ಹೋರಾಟ ಮಾಡೋಣ " ಎನ್ನುವ ಘೋಷಣೆಯೊಂದಿಗೆ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಒಂದು ದಿನದ ಹೋರಾಟ ಮಾಡಿ ಸಂಜೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಇಡೀ ರಾಜ್ಯಾದ್ಯಂತ ವಕ್ಫ್ ಕಾಯಿದೆ ವಿರುದ್ಧ ಜನಸಾಮಾನ್ಯರಿಗೆ ಮುಟ್ಟುವ ರೀತಿಯಲ್ಲಿ ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರ ಏನಿದೆ ಅದನ್ನು ವಿರೋಧಿಸುತ್ತಿದ್ದೇವೆ. "ನಮ್ಮ ಭೂಮಿ ನಮ್ಮ ಹಕ್ಕು " ಶೀರ್ಷಿಕೆಯಡಿ ಜನಜಾಗೃತಿ ಆಂದೋಲನವನ್ನು ಏರ್ಪಡಿಸಲಾಗಿದೆ. ನಮ್ಮ ನಮ್ಮ ಭೂಮಿಯ ಪಹಣಿಯನ್ನು ಪರೀಕ್ಷಿಸಿಕೊಂಡು ಮತ್ತೆ ಹೊಸ ಪಹಣಿ ತೆಗೆಸುವ ಪರಿಸ್ಥಿತಿ ರಾಜ್ಯ ಸರಕಾರ ತಂದುಕೊಟ್ಟಿದೆ. ಸಿದ್ದರಾಮಯ್ಯ ಅವರ ಸರಕಾರ ಯಾವ ದಿಕ್ಕಿಗೆ ಜನಸಾಮಾನ್ಯರ ಬದುಕು ತೆಗೆದುಕೊಂಡು ಹೊರಟಿದೆ ಗೊತ್ತಿಲ್ಲ. ಒಂದು ಕಡೆ ಅವರು ಕೊಡುತ್ತಿರುವ ಯೋಜನೆಗಳನ್ನು ಸಮತೋಲನೆಗೆ ತರಲಾಗದೇ ಹತ್ತು ಹಲವಾರು ಯೋಜನೆಗಳನ್ನು ವಿಲೀನಗೊಳಿಸಿ ಬರೀ ಕಣ್ಣು ಒರೆಸುವ ತಂತ್ರ ರಾಜ್ಯದಲ್ಲಿ ಮಾಡುತ್ತಿದೆ ಎಂದರು.

ರುದ್ರಭೂಮಿಗಳು ವಕ್ಫ್ ಆಸ್ತಿಗಳಾಗಿವೆ: ಚುನಾವಣೆ ನಡೆದು ಬೈ ಎಲೆಕ್ಷನ್ ನಡೆಯುತ್ತದೆ ಅಲ್ಲಿ ಮಾತ್ರ ಭಾಗ್ಯಗಳನ್ನು ಪೂರೈಸುವ ಕೆಲಸ ಮಾಡಿಕೊಂಡು ಈಗ ಜನಸಾಮಾನ್ಯರ, ರೈತರ, ಆಸ್ತಿಗೆ ಕಣ್ಣು ಹಾಕಿರುವ ಸರಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ ಪಹಣಿ ತೆಗೆಸಿ ನೋಡಿದರೇ ಅವರ ಮೂಲ ಹಕ್ಕನ್ನು ಬಿಟ್ಟು ವಕ್ಫ್ ಹೆಸರು ಬರುತ್ತಿದೆ. ಹಿಂದೂ ರುದ್ರಭೂಮಿಗಳು ಎಲ್ಲಾ ವಕ್ಫ್ ಆಸ್ತಿಗಳಾಗಿವೆ. ಗೌರಕಟ್ಟೆ ಎನ್ನುವ ಪ್ರದೇಶ ಗೋರಿಕಟ್ಟೆಗಳಾಗಿವೆ. ಇಲ್ಲಿ ಜಾತಿ ಓಲೈಸುವುದಕ್ಕಾಗಿ ಸಮಾಜವನ್ನು ಒಡೆಯುತ್ತಿರುವ ರೀತಿ ಇರಬಹುದು, ರೈತರಿಗಾಗಿಯೇ "ನಮ್ಮ ಭೂಮಿ ನಮ್ಮ ಹಕ್ಕು " ಶೀರ್ಷಿಕೆಯಡಿ ಜನಜಾಗೃತಿ ಆಂದೋಲನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಉಗ್ರ ಹೋರಾಟದ ಎಚ್ಚರಿಕೆ: ಯಾರದ್ದು ಪಹಣಿ ಬದಲಾಗಿದೆ ಅವರಿಂದ ಮನವಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ ನಾಲ್ಕೈದು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಠ ಮಾನ್ಯಗಳ ಆಸ್ತಿ ಕೂಡ ವಕ್ಫ್‌ಗೆ ಸೇರಿರುವುದನ್ನು ಖಂಡಿಸುತ್ತೇವೆ. ಮುಂದೆ ಇದಕ್ಕೆ ನ್ಯಾಯ ದೊರಕದಿದ್ದರೇ ಇನ್ನಷ್ಟು ಉಗ್ರವಾದ ಹೋರಾಟ ಮಾಡಲಾಗುವುದು. ಮುಂದೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರೈತರ ದೊಡ್ಡ ಪ್ರಮಾಣದಲ್ಲಿ ನ್ಯಾಯ ಸಿಗುವವರೆಗೂ ಜನಪ್ರತಿನಿಧಿಯೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ಬ್ರಿಟಿಷರ ಆಡಳಿತ ಕಾಲದಲ್ಲಿ ಈ ವಕ್ಫ್ ಕಾಯಿದೆ ಜಾರಿಗೆ ತಂದಿದ್ದು, ಅವರ ದರ್ಗಾ, ಮಸೀದಿಗಳನ್ನು ರಕ್ಷಣೆ ಮಾಡಬೇಕೆನ್ನುವುದು ಸರಕಾರದ ಕರ್ತವ್ಯ. ಆದರೆ ೧೯೭೪ರಲ್ಲಿ ಕರಾಳ ದಿನದಲ್ಲಿ ತುರ್ತು ಪರಿಸ್ಥಿತಿ ಏರಿದ ದಿವಸವಾಗಿದೆ. ಈ ಕಾಯಿದೆಗೆ ತಿದ್ದುಪಡಿ ತಂದರು. ಇದೆಲ್ಲಾ ವಕ್ಫ್ ಗೆ ಸೇರಿದೆ ಎಂದು ಎಲ್ಲಾ ಆಸ್ತಿಯನ್ನು ಪಟ್ಟಿ ಮಾಡಿಕೊಟ್ಟು ನೋಟಿಫೈ ಮಾಡಿದರು. ಅಂದು ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದರು. ಎಲ್ಲಾರು ಹಸ್ತಕ್ಕೆ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷದವರು ಈ ವಕ್ಫ್ ಕಾಯಿದೆ ತಿದ್ದುಪಡಿ ಇಂದು ಎಲ್ಲಾ ರೈತರ ಜಮೀನು ಇಲ್ದೇ ಇಡೀ ಗ್ರಾಮವನ್ನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬ್ರಿಟಿಷ್ ಕಾಲದಲ್ಲಿ ಭಾರತ ಬಿಟ್ಟು ತೊಲಗಿ ಹೇಳಿದ ಕಾಲದಲ್ಲಿ ಪ್ರಸ್ತೂತ ನಾವು ಹಳ್ಳಿ ಜನ ಇವತ್ತು ಊರು ಬಿಟ್ಟು ತೊಲಗಿ ನೀವು ಎಂದು ವಕ್ಫ್ ಕಾಯಿದೆ ಹೇಳುತ್ತಿದೆ. ನಮಗೆ ಇರುವುದು ಒಂದೆ ದೇಶ ಭಾರತ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದರು.ಇದೇ ವೇಳೆ ನುಗ್ಗೇಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಮಠಾಧೀಶರಾದ ವಿಜಯಕುಮಾರ ಸ್ವಾಮೀಜಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ರೇಣು ಕುಮಾರ್, ಗಿರೀಶ್, ರೈತ ಮೋರ್ಚಾ ಅಧ್ಯಕ್ಷ ಬಿ.ಎಚ್. ನಾರಾಯಣಗೌಡ, ನಗರಾಧ್ಯಕ್ಷ ವೇಣುಕುಮಾರ್‌, ಎಸ್.ಡಿ. ಚಂದ್ರು, ವಿಜಯಲಕ್ಷ್ಮಿ ಅಂಜನಪ್ಪ, ವೇದಾವತಿ, ರಘು, ಚನ್ನಕೇಶವ, ಕುಮಾರ್‌ ಉಪಸ್ಥಿತರಿದ್ದರು.

Share this article