ಸಮರ್ಪಕ ವಿದ್ಯುತ್‌ಗಾಗಿ ರೈತರೊಂದಿಗೆ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Mar 29, 2025, 12:38 AM IST
ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವಿಫಲ, ಟಿಸಿ ಕೊಡುವಲ್ಲಿ ವಿಳಂಬ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಹುಬ್ಬಳ್ಳಿಯಲ್ಲಿ ಕಲಘಟಗಿ- ಅಳ್ನಾವರ ತಾಲೂಕುಗಳ ರೈತರು ಬಿಜೆಪಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಸಮರ್ಪಕ ವಿದ್ಯುತ್ ಪೂರೈಕೆ, ಟಿಸಿ ಕೊಡುವಲ್ಲಿ ವಿಳಂಬ ಖಂಡಿಸಿ ಶುಕ್ರವಾರ ಕಲಘಟಗಿ-ಅಳ್ನಾವರ ತಾಲೂಕುಗಳ ರೈತರು ಬಿಜೆಪಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ: ಸಮರ್ಪಕ ವಿದ್ಯುತ್ ಪೂರೈಕೆ, ಟಿಸಿ ಕೊಡುವಲ್ಲಿ ವಿಳಂಬ ಖಂಡಿಸಿ ಶುಕ್ರವಾರ ಕಲಘಟಗಿ-ಅಳ್ನಾವರ ತಾಲೂಕುಗಳ ರೈತರು ಬಿಜೆಪಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕಲಘಟಗಿ, ಅಳ್ನಾವರ, ಧಾರವಾಡ ಗ್ರಾಮೀಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಅಮರಗೋಳ ಎಪಿಎಂಸಿ ಎದುರಿನ ಪ್ರವೇಶ ದ್ವಾರದ ಬಳಿ ಸಮಾವೇಶಗೊಂಡರು. ಅಲ್ಲಿಂದ ಚಕ್ಕಡಿ, ಟ್ರ್ಯಾಕ್ಟರ್, ಕೆಟ್ಟ ಟಿಸಿಗಳೊಂದಿಗೆ ನವನಗರದಲ್ಲಿರುವ ಹೆಸ್ಕಾಂ ಕಚೇರಿ ವರೆಗೆ ಪಾದಯಾತ್ರೆ ಕೈಗೊಂಡು ಹೆಸ್ಕಾಂಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ 24 ಗಂಟೆಯೊಳಗೆ ಟಿಸಿ ವಿತರಣೆಗೆ ಆದೇಶ ಹೊರಡಿಸಬೇಕು. ಮಳೆಗಾಲದಲ್ಲಿ ಬಿದ್ದ ಕಂಬ-ತಂತಿಯನ್ನು ತಕ್ಷಣ ಸರಿಪಡಿಸಬೇಕು. ದೇವಿಕೊಪ್ಪ, ಬಮ್ಮಿಗಟ್ಟಿ, ಅರಳಿಕಟ್ಟಿ ಕ್ರಾಸ್, ನಿಗದಿ ಗ್ರಾಮಗಳಿಗೆ ಕೆಇಬಿ ಗ್ರಿಡ್‌ಗಳನ್ನು ಕಳೆದ ಸರ್ಕಾರ ಮಂಜೂರು ಮಾಡಿತ್ತು. ಅವುಗಳನ್ನು ತಕ್ಷಣವೇ ಆರಂಭಿಸಬೇಕು. ಕಾರ್ಯನಿರತ ಗ್ರಿಡ್‌ಗಳನ್ನು ಹೆಚ್ಚಿನ ದರ್ಜೆಗೆ ಏರಿಸಬೇಕು. ರೈತರ ಅನಧಿಕೃತ ಪಂಪ್‌ಸೆಟ್‌ಗಳಿಗೆ ಅಕ್ರಮ- ಸಕ್ರಮಗೊಳಿಸಲು ಶೀಘ್ರ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿದರು.

ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಕಲಘಟಗಿ ಸೇರಿದಂತೆ ಎಲ್ಲೆಡೆ ರೈತರ ಪಂಪ್‌ಸೆಟ್‌ಗೆ ಅಗತ್ಯ ಸಾಮರ್ಥ್ಯದ ಟಿಸಿ ಇಲ್ಲದೇ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಉಸ್ತುವಾರಿ ಸಚಿವ ಸಂತೋಷ ಲಾಡ್ ಕ್ಷೇತ್ರದಲ್ಲಿ ವಿದ್ಯುತ್‌ನ ಕೊರತೆ ಎದುರಾಗಿದ್ದರೂ ಸಚಿವರು ಉಡಾಫೆ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ರೈತರಿಂದ 2-3 ವರ್ಷಗಳ ಹಿಂದೆಯೇ ಹಣ ಪಾವತಿಸಿಕೊಂಡಿರುವ ಸರ್ಕಾರ ಇಂದಿಗೂ ಟಿಸಿಗಳನ್ನು ವಿತರಿಸಲು ಟೆಂಡರ್ ಕರೆಯುವ ಕೆಲಸ ಮಾಡಿಲ್ಲ. ಕೂಡಲೇ ಟಿಸಿ ಸರಬರಾಜು ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರೈತರಿಗೆ ವಿದ್ಯುತ್ ಹಾಗೂ ಟಿಸಿಗಳ ಕೊರತೆಯಿಂದಾಗುತ್ತಿರುವ ಸಮಸ್ಯೆಯನ್ನು ಕೂಡಲೇ ಉಸ್ತುವಾರಿ ಸಚಿವರು ಹಾಗೂ ಹೆಸ್ಕಾಂ ಅಧಿಕಾರಿಗಳು ಪರಿಹರಿಸುವಂತೆ ಒತ್ತಾಯಿಸಿದರು.

ಬಳಿಕ ಮನವಿ ಸ್ವೀಕರಿಸಲು ಬಂದ ಹೆಸ್ಕಾಂನ ತಾಂತ್ರಿಕ ನಿರ್ದೇಶಕ ಎಸ್. ಜಗದೀಶ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ಕಲಘಟಗಿ ಕ್ಷೇತ್ರದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ, ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಸೇರಿದಂತೆ ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ಗ್ರಾಮಾಂತರ ಭಾಗದ ಸಾವಿರಾರು ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.ಕ್ಷೇತ್ರಕ್ಕೆ ಲಾಡ್‌ ಕೊಡುಗೆ ಶೂನ್ಯ: ನಾಗರಾಜ ಛಬ್ಬಿ

3 ಬಾರಿ ಚುನಾಯಿತರಾದರೂ ಕಲಘಟಗಿ ಕ್ಷೇತ್ರಕ್ಕೆ ಸಚಿವ ಸಂತೋಷ ಲಾಡ್ ಕೊಡುಗೆ ಶೂನ್ಯವಾಗಿದೆ. ರಾಜ್ಯ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಒಂದೇ ಒಂದು ರುಪಾಯಿ ಅನುದಾನ ತರಲು ಲಾಡ್‌ಗೆ ಸಾಧ್ಯವಾಗಿಲ್ಲ ಎಂದು ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಆರೋಪಿಸಿದರು.

ಕಳೆದ ಸರ್ಕಾರದಲ್ಲಿ ಬಿಜೆಪಿ ಶಾಸಕ ದಿ. ಸಿ.ಎಂ. ನಿಂಬಣ್ಣವರ ವಿದ್ಯುತ್ ಕಂಬ ಹಾಗೂ ಟಿಸಿಗಳಿಗೆ ಅಂದಾಜು ಪತ್ರಿಕೆ ತಯಾರಿಸಿ ತಕ್ಷಣ ₹200 ಕೋಟಿ ಅನುದಾನ ತಂದಿದ್ದರು. ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಆದರೆ, ಸಚಿವ ಸಂತೋಷ ಲಾಡ್ ಎಲ್ಲ ಅಭಿವೃದ್ಧಿಯನ್ನು ತಾವೇ ಮಾಡಿದಂತೆ ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಕ್ಯಾಬಿನೆಟ್‌ನಲ್ಲಿ ಬಿಲ್ ಪಾಸ್ ಮಾಡಿಸಿ ಕಲಘಟಗಿ ಕ್ಷೇತ್ರಕ್ಕೆ ₹500 ಕೋಟಿ ಅನುದಾನ ತರಬೇಕು ಎಂದು ಸವಾಲು ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ